ವಿಜೃಂಭಣೆಯಿಂದ ನಡೆದ ಶ್ರೀವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

| Published : Feb 20 2025, 12:46 AM IST

ವಿಜೃಂಭಣೆಯಿಂದ ನಡೆದ ಶ್ರೀವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇಗುಲ ಪ್ರಾಂಗಣದ ಮೂಲಕ ಶ್ರೀಮದ್ದೂರಮ್ಮ, ನಗರಕೆರೆ ಪಟಾಲದಮ್ಮ, ಆಲೂರಮ್ಮ ದೇವರಗಳ ಉತ್ಸವ ಹಾಗೂ ಬೂದನೂರು ಅಂಕನಾಥೇಶ್ವರ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿದ ರಥೋತ್ಸವಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ವೈದ್ಯನಾಥಪುರದ ಪ್ರರಾಣ ಪ್ರಸಿದ್ಧ ಶ್ರೀವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

ಸ್ಥಳೀಯರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು. ಶ್ರೀವೈದ್ಯನಾಥೇಶ್ವರ ಸ್ವಾಮಿ ದೇಗುಲದಲ್ಲಿ ಬ್ರಹ್ಮರಥೋತ್ಸವದ ಅಂಗವಾಗಿ ಮುಂಜಾನೆ ಶ್ರೀವೈದ್ಯನಾಥೇಶ್ವರ ಮೂಲ ವಿಗ್ರಹಕ್ಕೆ ಕ್ಷೀರ ಅಭಿಷೇಕ, ಪಂಚಾಮೃತ ಅಭಿಷೇಕ ದೊಂದಿಗೆ ಬಿಲ್ವಾರ್ಚನೆ ಸೇವೆ ಹಾಗೂ ಶ್ರೀಪ್ರಸನ್ನ ಪಾರ್ವತಂಬಾ ದೇವಿಗೆ ಪುಷ್ಪಾಲಂಕಾರ ಸೇವೆಯೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಬೆಳಗ್ಗೆ 11 ರಿಂದ 11.30 ಸುಮಾರಿಗೆ ಶುಭ ಮೀನ ಲಗ್ನದಲ್ಲಿ ಶ್ರೀವೈದ್ಯನಾಥೇಶ್ವರ ಹಾಗೂ ಪ್ರಸನ್ನ ಪಾರ್ವತಂಬ ದೇವಿ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಧಾರ್ಮಿಕ ದತ್ತಿ ಇಲಾಖೆ ಪರ ತಹಸೀಲ್ದಾರ್ ಡಾ. ಸ್ಮಿತಾರಾಮು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು.

ದೇಗುಲದ ಆವರಣದಲ್ಲಿ ನೆರೆದಿದ್ದ ಭಕ್ತಾದಿಗಳು ಶಿವನಾಮಸ್ಮರಣೆಯೊಂದಿಗೆ ರಥವನ್ನು ಎಳೆದು ಧನ್ಯತಾಭಾವ ಮೆರೆದರು. ನಂತರ ದೇಗುಲ ಪ್ರಾಂಗಣದ ಮೂಲಕ ಶ್ರೀಮದ್ದೂರಮ್ಮ, ನಗರಕೆರೆ ಪಟಾಲದಮ್ಮ, ಆಲೂರಮ್ಮ ದೇವರಗಳ ಉತ್ಸವ ಹಾಗೂ ಬೂದನೂರು ಅಂಕನಾಥೇಶ್ವರ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿದ ರಥೋತ್ಸವಕ್ಕೆ ಭಕ್ತಾದಿಗಳು ಪೂಜೆ ಸಲ್ಲಿಸಿದರು.

ರಥ ಸಂಚರಿಸುವ ಮಾರ್ಗದಲ್ಲಿ ಗ್ರಾಮಸ್ಥರು ಅರವಟ್ಟಿಗೆಗಳನ್ನು ತೆರೆದು ಭಕ್ತಾದಿಗಳಿಗೆ ಕೋಸಂಬರಿ, ಮಜ್ಜಿಗೆ, ಪಾನಕ ವಿತರಣೆ ಮಾಡಿದರು. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಜೆ, ಬ್ಯಾಡರಹಳ್ಳಿ ಗ್ರಾಮಸ್ಥರಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮನ್ಮೂಲ್ ನಿರ್ದೇಶಕ ಹರೀಶ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಲಕ್ಷ್ಮಿ ನರಸಿಂಹ, ನಗರಕೆರೆ ಗ್ರಾಪಂ ಅಧ್ಯಕ್ಷ ವಿ.ಎನ್.ಗಿರೀಶ್, ವೈದ್ಯನಾಥಪುರ ಪ್ರಸನ್ನ ಪಾರ್ವತಂಬ ಶ್ರೀ ವೈದ್ಯನಾಥೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಟಿ.ಶಿವರಾಜು, ಮಾಜಿ ಅಧ್ಯಕ್ಷ ವಿ.ಎಲ್.ರಾಜು, ವಿ.ಟಿ.ಕೃಷ್ಣ, ವಿ.ಎಲ್.ಶಿವಲಿಂಗಯ್ಯ, ವಿ. ಟಿ.ಜಗದೀಶ್, ಗ್ರಾಮದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅಪ್ಪು ಪಿ.ಗೌಡ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.