ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಕೈಗೋನಹಳ್ಳಿಯ ಶ್ರೀವೀರಭದ್ರೇಶ್ವರ ಸ್ವಾಮಿಯವರ ಅಡ್ಡಪಲ್ಲಕಿ ಉತ್ಸವ ಅದ್ಧೂರಿಯಾಗಿ ನಡೆಯಿತು.ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದ ಅಡ್ಡಪಲ್ಲಕಿಯನ್ನು ಹೆಗಲ ಮೇಲೆ ಹೊತ್ತು ನಡೆಯುವ ಮೂಲಕ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಮ್ಮ ಸ್ವಗ್ರಾಮ ಕೈಗೋನಹಳ್ಳಿಯಲ್ಲಿ ನಡೆಯುತ್ತಿರುವ ಊರ ಹಬ್ಬಕ್ಕೆ ಚಾಲನೆ ನೀಡಿದರು.
ರಂಗದ ಹಬ್ಬದ ಅಂಗವಾಗಿ ಕೈಗೋನಹಳ್ಳಿಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ವಿದ್ಯುತ್ ದಿಪಾಲಂಕಾರವನ್ನು ಮಾಡಲಾಗಿತ್ತು.ಬೆಳಗ್ಗೆ ಹಬ್ಬಕ್ಕೆ ಚಾಲನೆ ನೀಡಲು ಗ್ರಾಮಸ್ಥರು ತಾಲೂಕಿನ ಹೇಮಗಿರಿಗೆ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಹೇಮಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಿ ಮೆರವಣಿಗೆಯಲ್ಲಿ ಕರೆತಂದು ಮಾಜಿ ಸಚಿವ ನಾರಾಯಣಗೌಡರ ನಿವಾಸಕ್ಕೆ ಕೊಂಡೊಯ್ದರು.
ಮಾಜಿ ಸಚಿವ ನಾರಾಯಣಗೌಡ ದಂಪತಿ ಉತ್ಸವ ಮೂರ್ತಿಯನ್ನು ಭಕ್ತಿ ಪೂರ್ವಕವಾಗಿ ಬರ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿ ನಂತರ ಕೈಗೋನಹಳ್ಳಿಗೆ ಬೀಳ್ಕೊಟ್ಟರು. ಈ ವೇಳೆ ನೂರಾರು ಜನರು ಪಾಲ್ಗೊಂಡಿದ್ದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ನಾರಾಯಣಗೌಡ, ಭಗವಂತನ ಪ್ರೇರಣೆಯಿಲ್ಲದೆ ಯಾವುದು ಕೂಡಾ ನಡೆಯುವುದಿಲ್ಲ. ಭಗವಂತನ ಸಾಕ್ಷಾತ್ಕಾರವನ್ನು ಸಾಕಾರಗೊಳಿಸಲು ಪ್ರತಿ ಗ್ರಾಮಗಳಲ್ಲಿ ಇಂತಹ ದೈವೀಕವಾದ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.
ಹಳ್ಳಿಗಳಲ್ಲಿ ಇರುವ ಜನರು ಮುಗ್ಧರು. ಅವರಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎಂಬುದರ ನಡುವೆ ಯಾವುದೇ ಬೇಧಭಾವ ಮಾಡುವುದಿಲ್ಲ. ಇಂದಿಗೂ ಹಳ್ಳಿಗಳಲ್ಲಿ ಶಾಂತಿ, ನೆಮ್ಮದಿ ಕಾಣಸಿಗುತ್ತದೆ. ಆದರೆ, ರಾಜಕಾರಣಿಗಳು ಮಾತ್ರ ನೆಮ್ಮದಿ ವಾತಾವರಣವನ್ನು ಕೆಡಿಸುವ ಕೆಲಸ ಮಾಡುತ್ತಾರೆ. ಜನರು ಎಚ್ಚರದಿಂದಿರಬೇಕು ಎಂದು ಕರೆ ನೀಡಿದರು.ನನ್ನ ಅಧಿಕಾರದ ಅವಧಿಯಲ್ಲಿ ತೃಪ್ತಿ ಸಿಗುವಷ್ಟು ಕೆಲಸ ಮಾಡಿದ್ದೇನೆ. ಭಕ್ತರಿಗೆ ನೆರವಾಗುವ ಹಲವು ದೇವಾಲಯಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇನ್ನು ಕೆಲವೆಡೆ ಬಾಕಿ ಕೆಲಸಗಳು ಇದ್ದು, ಅವು ಮುಂದುವರೆಯಬೇಕು ಎಂದರು.
ಈ ವೇಳೆ ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕುಮಾರ್, ಕೈಗೋನಹಳ್ಳಿ ಮುಖಂಡರಾದ ಜಯರಾಮು, ಮುದ್ದೇಗೌಡ, ಪಟೇಲ್ ನಂಜಪ್ಪ, ಯುವ ಮುಖಂಡರಾದ ಲೋಹಿತ್, ಸುನಿಲ್, ಅನಿಲ್, ಮೋದೂರು ಮಂಜು, ದಯಾನಂದ, ನಂದೀಶ್, ನಾರಾಯಣಗೌಡರ ಧರ್ಮಪತ್ನಿ ದೇವಕಿ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.