ಸಾರಾಂಶ
ಕೊನೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಪುಷ್ಪಕೈಂಕರ್ಯಸೇವೆಯೊಂದಿಗೆ ದಶಾವತಾರ ಉತ್ಸವ ಸಂಪನ್ನಗೊಂಡಿತು. ತಡರಾತ್ರಿವರೆಗೂ ಸಾವಿರಾರು ಭಕ್ತರು ಕಾದಿದ್ದು ಸ್ವಾಮಿಯ ದಶಾವತಾರದ ವೈಭವವನ್ನು ಕಣ್ತುಂಬಿಕೊಂಡರು.
ಮೇಲುಕೋಟೆ: ಶ್ರೀ ಚೆಲುವನಾರಾಯಣಸ್ವಾಮಿಯ ದಶಾವತಾರ ಉತ್ಸವವು ಭಾನುವಾರ ಮಧ್ಯರಾತ್ರಿ ನೆರವೇರಿತು.
ತಿರುನಕ್ಷತ್ರ ಮಹೋತ್ಸವದಂದು ರಾಮಾನುಜಾಚಾರ್ಯರಿಗೆ ಶ್ರೀ ಚೆಲುವನಾರಾಯಣಸ್ವಾಮಿ ದಶಾವತಾರ ದರ್ಶನ ನೀಡಿದ ಪ್ರತೀಕವಾಗಿ ಜಯಂತ್ಯುತ್ಸವ ದಿನ ರಾತ್ರಿ ಉತ್ಸವ ನಡೆಯಿತು.ರಾತ್ರಿ 12-30ಕ್ಕೆ ಆರಂಭವಾದ ಉತ್ಸವ ಮಧ್ಯರಾತ್ರಿ 2.30ರ ತನಕ ಸುಶ್ರಾವ್ಯ ಮಂಗಳವಾದ್ಯಗಳೊಂದಿಗೆ ವೈಭವದಿಂದ ನೆರವೇರಿತು. ಬಲರಾಮ ಸಾಕ್ಷಾತ್ ರಾಮಾನುಜರೇ ಆದ ಕಾರಣ ಉಳಿದ ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರುಶುರಾಮ, ಶ್ರೀರಾಮ, ಕೃಷ್ಣಾವತಾರದ ಕಪಾಯಿಗಳು ಮತ್ತು ಕುಲಾವಿಗಳನ್ನು ಅಲಂಕಾರ ಮಾಡಿ ದೇವಾಲಯದ ಹೊರಪ್ರಾಂಗಣದಲ್ಲಿ ಉತ್ಸವ ನೆರವೇರಿಸಲಾಯಿತು.
ಕೊನೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಪುಷ್ಪಕೈಂಕರ್ಯಸೇವೆಯೊಂದಿಗೆ ದಶಾವತಾರ ಉತ್ಸವ ಸಂಪನ್ನಗೊಂಡಿತು. ತಡರಾತ್ರಿವರೆಗೂ ಸಾವಿರಾರು ಭಕ್ತರು ಕಾದಿದ್ದು ಸ್ವಾಮಿಯ ದಶಾವತಾರದ ವೈಭವವನ್ನು ಕಣ್ತುಂಬಿಕೊಂಡರು.ಇದಕ್ಕೂ ಮುನ್ನ ರಾತ್ರಿ 8 ಗಂಟೆಗೆ ರಾಮಾನುಜಾಚಾರ್ಯರಿಗೆ ಶ್ರೀಗಂಧದ ಅಲಂಕಾರದೊಂದಿಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಸೀತಾರಣ್ಯ ಸನ್ನಿಧಿಗೆ ಉತ್ಸವ ನೆರವೇರಿತು. ನಂತರ ದೇಶಿಕರ ಸನ್ನಿಧಿಗೆ ಮತ್ತು ಮನವಾಳ ಮಾಮುನಿಜೀಯರ್ ಸನ್ನಿಧಿಗೆ ಆಚಾರ್ಯರ ಉತ್ಸವ ನೆರವೇರಿತು.
ದಶಾವತಾರದ ನಂತರ ರಾತ್ರಿ 2.30ಕ್ಕೆ ಪ್ರಾರಂಭವಾದ ಮಹಾಶಾತ್ತುಮೊರೆಯ ಕಾರ್ಯಕ್ರಮಗಳು ಸೋಮವಾರ ಬೆಳಗಿನ ಜಾವ 6 ಗಂಟೆಗೆ ಮುಕ್ತಾಯವಾದವು. ಮೇ 2ರಿಂದ ಆರಂಭವಾದ ರಾಮಾನುಜರ ತಿರುನಕ್ಷತ್ರದ ಕಾರ್ಯಕ್ರಮಗಳು ಅತ್ಯಂತ ವೈಭವ ಮತ್ತು ಶ್ರದ್ಧಾಭಕ್ತಿಯಿಂದ 10 ದಿನಗಳ ಕಾಲ ನೆರವೇರುವುದರೊಂದಿಗೆ ಮುಕ್ತಾಯವಾದವು.