ಶ್ರೀದೇವಿ ಮಹಾತ್ಮೆ ಬಯಲಾಟ ಆಡಿಸಿದ ತೃತೀಯಲಿಂಗಿ ಬಳಗ

| Published : Apr 07 2024, 01:52 AM IST / Updated: Apr 07 2024, 01:53 AM IST

ಸಾರಾಂಶ

ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಯಕ್ಷಗಾನ ಕಲಾವಿದರಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಗೌರವಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ತೃತೀಯ ಲಿಂಗಿಗಳಾಗಿ ಗೌರವಯುತವಾಗಿ ಜೀವನ ನಡೆಸುತ್ತಿರುವ ಮಂಗಳೂರಿನ ಅಶೋಕನಗರ ದಂಬೇಲಿನ ಮಂಗಳಮುಖಿ ಐಶ್ವರ್ಯ ಪರಿವಾರದ ಸದಸ್ಯರು ಒಟ್ಟುಸೇರಿ ಕೋಡಿಕಲ್ ಕಟ್ಟೆಯ ಬಳಿ ದ್ವಿತೀಯ ಬಾರಿಗೆ ಪಾವಂಜೆ ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ನೆರವೇರಿಸಿದ್ದಾರೆ.

ಈ ಸಂದರ್ಭ ಪಟ್ಲ ಸತೀಶ್ ಶೆಟ್ಟಿ ಅವರನ್ನು ಯಕ್ಷಗಾನ ಕಲಾವಿದರಿಗೆ ಸಲ್ಲಿಸುತ್ತಿರುವ ಸೇವೆಗಾಗಿ ಗೌರವಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ, ಐಶ್ವರ್ಯ ಪರಿವಾರದ ಸದಸ್ಯರು ಯಾರಲ್ಲಿಯೂ ಭಿಕ್ಷೆ ಬೇಡದೆ ತಮ್ಮ ಸಂಪಾದನೆಯ ಒಂದಂಶವನ್ನು ಒಟ್ಟು ಸೇರಿಸಿ ಭಕ್ತಿಪೂರ್ವಕ ಕಾರ್ಯಕ್ರಮವನ್ನು ಅನ್ನಸಂತರ್ಪಣೆಯೊಂದಿಗೆ ಸ್ಥಳೀಯ ಪರಿಸರದವರನ್ನು ಒಟ್ಟು ಸೇರಿಸಿ ಸಮಾಜದಲ್ಲಿ ಎಲ್ಲರೊಂದಿಗೆ ನಾವು ಇದ್ದೇವೆ ಎಂದು ತೋರಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಥಮವಾಗಿ ಯಕ್ಷಗಾನ ಕಲಾವಿದರ ನೋವುಗಳಿಗೆ ಸ್ಪಂದಿಸುತ್ತಿದ್ದು, ಈ ನಡುವೆ ಕಳೆದ ಎರಡು ವರ್ಷಗಳಿಂದ ನಾಟಕ, ರಂಗಭೂಮಿ, ದೈವಾರಾಧನೆಯ ಪರಿಚಾರಕರಿಗೆ ಮತ್ತು ವಾದ್ಯವೃಂದದವರಿಗೆ ಸಹಕರಿಸುತ್ತಿದೆ. ಮುಂದಿನ ಹಂತದಲ್ಲಿ ಮಂಗಳಮುಖಿ ಸದಸ್ಯರಿಗೂ ಸಹಾಯ, ಸಹಕಾರದ ಬಗ್ಗೆ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ವೇದಿಕೆಯಲ್ಲಿ ಸ್ಥಳೀಯ ಜನಪ್ರತಿನಿಧಿ ಮನೋಜ್ ಕುಮಾರ್, ಐಶ್ವರ್ಯ ಪರಿವಾರದ ವೃಂದಾ ನಾಯಕ್, ನಿಖಿಲ, ಐಶ್ವರ್ಯ, ಸಾಕ್ಷ್ಯ ಇದ್ದರು.