ಕನ್ನಡಪ್ರಭ ವಾರ್ತೆ ರಾಮದುರ್ಗ ರಾಜ್ಯದಲ್ಲಿ ಬಹುತೇಕ ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿವೆ. ಆದರೆ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲಮುಕ್ತವಾಗಿ ಈ ವರ್ಷ ₹ 140.91 ಕೋಟಿ ಲಾಭದಲ್ಲಿದೆ ಎಂದು ಕಾರ್ಖಾನೆಯ ಅಧ್ಯಕ್ಷ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯದಲ್ಲಿ ಬಹುತೇಕ ಸಹಕಾರಿ ರಂಗದ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಿ ಸಾಲದ ಸುಳಿಯಲ್ಲಿವೆ. ಆದರೆ ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಸಾಲಮುಕ್ತವಾಗಿ ಈ ವರ್ಷ ₹ 140.91 ಕೋಟಿ ಲಾಭದಲ್ಲಿದೆ ಎಂದು ಕಾರ್ಖಾನೆಯ ಅಧ್ಯಕ್ಷ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.ಭಾನುವಾರ ಖಾನಪೇಟೆಯ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ 2024-25ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಗೆ ಲೀಜ್ ಬಾಡಿಗೆ, ಠೇವುಗಳ ಮೇಲಿನ ಬಡ್ಡಿ ಅಲ್ಲದೆ ಇತರೆ ಆದಾಯ ಸೇರಿ ₹ 7.62 ಕೋಟಿ ಆದಾಯದಲ್ಲಿ ಷೇರುದಾರರಿಗೆ ರಿಯಾತಿ ದರದಲ್ಲಿ ಸಕ್ಕರೆ ವಿತರಣೆ, ಆಡಳಿತಾತ್ಮಕ ವೆಚ್ಚ, ಶಾಸನ ಬದ್ಧ ತೆರಿಗೆ ಮತ್ತು ಶುಲ್ಕ ಸೇರಿ ಒಟ್ಟು ₹ 3.84 ಕೋಟಿ ವೆಚ್ಚವಾಗಿ ₹ 3.78 ಕೋಟಿ ಆದಾಯವಾದಲ್ಲಿ ₹ 2.37 ಕೋಟಿ ಸವಕಳಿ ತೆಗೆದು ₹ 1.40 ಕೋಟಿ ಲಾಭಾಂಶವಾಗಿದೆ ಎಂದು ತಿಳಿಸಿದರು.ಈಗಾಗಲೇ ಕಾರ್ಖಾನೆ ತನ್ನ ಎಲ್ಲ ಸಾಲಗಳನ್ನು ತೀರಿಸಿ ಋಣಮುಕ್ತ ಕಾರ್ಖಾನೆಯಾಗಿ ಹೊರಹೊಮ್ಮಿದೆ. ಕಾರ್ಖಾನೆಯ ಲಾಭಾಂಶದಲ್ಲಿ ಎಲ್ಲ ಷೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಮಾಡುತ್ತಿದ್ದು ಮುಂದಿನ ವರ್ಷ ಕೂಡ ರೈತರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುವುದು ಎಂದು ಮಹಾದೇವಪ್ಪ ಯಾದವಾಡ ತಿಳಿಸಿದರು. ಪ್ಯಾರಿ ಕಂಪನಿಯ ಎಂ.ಡಿ.ಶಿವಸುಬ್ರಮಣ್ ಸೇರಿದಂತೆ ಯಾರು ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವರ್ತನೆ ಹೀಗೆ ಮುಂದುವರಿದರೆ ಪ್ಯಾರಿ ಕಂಪನಿಗೆ ನೀಡಿರುವ ಲೀಜ್ ಹಿಂದಕ್ಕೆ ಪಡೆಯುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ತೊರಗಲ್ ಗಚ್ಚಿನ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪಾಧ್ಯಕ್ಷ ಬಿ.ಎಸ್.ಬೆಳವಣಕಿ ಸ್ವಾಗತಿಸಿದರು. ನಿರ್ದೇಶಕ ಬಸವರಾಜ ಹಿರೇರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಮಲ್ಲಣ್ಣ ಯಾದವಾಡ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ಬಸನಗೌಡ ದ್ಯಾಮನಗೌಡ್ರ ವಂದಿಸಿದರು. ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್ ಅಖ್ತಾರ, ಆಡಳಿತ ಮಂಡಳಿ ಸದಸ್ಯರು, ಪ್ಯಾರಿ ಶುಗರ್ಸ್ ಎಂಡಿ ಶಿವಸುಬ್ರಹ್ಮಣ್ಯ ಹಾಜರಿದ್ದರು.ಈ ವೇಳೆ ಷೇರುದಾರರ ಕಬ್ಬು ಕಟಾವು ಮಾಡದೇ ಷೇರುದಾರರಲ್ಲದವರ ಕಬ್ಬು ಕಟಾವು ಮಾಡಲಾಗುತ್ತಿದೆ, ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಸಾಕಷ್ಟಿದ್ದರೂ ದೂರದ ಸ್ಥಳದಿಂದ ಕಬ್ಬು ತರಲಾಗುತ್ತಿದೆ ಎಂದು ರೈತರು ಆಕ್ರೋಶ ಹೊರ ಹಾಕಿದರು. ಅಲ್ಲದೇ, ಕಾರ್ಖಾನೆ ಖಾನಪೇಟ ಮತ್ತು ಕಿಲ್ಲಾತೊರಗಲ್ ಪ್ರದೇಶದಲ್ಲಿದ್ದು, ಈ ಭಾಗದ ರೈತರ ಕಬ್ಬನ್ನು ಆದ್ಯತೆಯ ಮೇಲೆ ಕಟಾವು ಮಾಡುವುದನ್ನು ಬಿಟ್ಟು ಬೇರೆ ರೈತರ ಕಬ್ಬು ಕಟಾವು ಮಾಡಲಾಗುತ್ತಿದೆ. ಇದನ್ನು ಸರಿಪಡಿಸಕೊಳ್ಳದಿದ್ದರೆ ಕಾರ್ಖಾನೆಗೆ ಬೀಗ ಜಡಿಯಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.