ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹೇಮಗಿರಿ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಭವ್ಯ ತೆಪ್ಪೋತ್ಸವವು ಹೇಮಾವತಿ ನದಿಯಲ್ಲಿ ಭಾನುವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು.ಮರದ ಹಲಗೆಗಳು ಹಾಗೂ ಬೃಹತ್ ಡ್ರಮ್ ಗಳಿಂದ ಸಿದ್ಧಪಡಿಸಿದ್ದ ತೆಪ್ಪದಲ್ಲಿ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಇಟ್ಟು ಅಲಂಕರಿಸಿ ಕಲರವ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯ ತೆಪ್ಪೋತ್ಸವಕ್ಕೆ ಶಾಸಕ ಎಚ್.ಟಿ ಮಂಜು ಹಾಗೂ ತಹಸೀಲ್ದಾರ್ ಅಶೋಕ್ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಉತ್ಸವ ಮೂರ್ತಿಗಳಿಗೆ ಬೆಟ್ಟದ ಪಾದದಿಂದ ಪೂಜೆ ಸ್ವೀಕರಿಸಿ ಹೊರಟ ತೆಪ್ಪವು ಹೇಮಾವತಿ ನದಿ ಮಧ್ಯದಲ್ಲಿರುವ ಬೃಗು ಶಿಲೆಗೆ ಪೂಜೆ ಸಲ್ಲಿಸಿ ನಾಟನಹಳ್ಳಿ ಭಾಗಕ್ಕೆ ತೆರಳಿ ಅಲ್ಲಿಂದ ನೇರವಾಗಿ ಕುಪ್ಪಳ್ಳಿ ಭಾಗಕ್ಕೆ ಬಂದು ಪೂಜೆ ಸ್ವೀಕರಿಸಿ ಸ್ವಸ್ಥಾನಕ್ಕೆ ಮರಳಿತು. ತೆಪ್ಪೋತ್ಸವ ಅಂಗವಾಗಿ ವಿದ್ಯುತ್ ದೀಪಾಲಂಕಾರ ಹಾಗೂ ಡಿ.ಜೆ ಸದ್ದು ಭಕ್ತರ ಮನ ಸೂರೆಗೊಂಡಿತು. ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದ ಬೆಟ್ಟದ ಪಾದ ಹಾಗೂ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ತೆಪ್ಪೋತ್ಸವ ಕಣ್ಣು ತುಂಬಿಕೊಳ್ಳಲು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಭಾಗಿಯಾಗಿದ್ದರು.ಫೆ.5ರಂದು ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ನಡೆದಿತ್ತು. ತೆಪ್ಪೋತ್ಸವದೊಂದಿಗೆ ಹೇಮಗಿರಿ ಜಾತ್ರೆಗೆ ತೆರೆ ಕಂಡಿತು. ಈ ವೇಳೆ ಬಂಡಿಹೊಳೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ರಾಜಶ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಲೆಕ್ಕಾಧಿಕಾರಿ ಪೂಜಾ ಗೌಡ, ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷ ಆನಂದೇಗೌಡ, ಗ್ರಾಪಂ ಸದಸ್ಯ ದರ್ಶನ್ ಹಲವರು ಇದ್ದರು.
ನಾಳೆ ರೇಣುಕಾ ಎಲ್ಲಮ್ಮ ದೇವಿ ಜಾತ್ರಾ ಮಹೋತ್ಸವಮದ್ದೂರು:
ಪಟ್ಟಣದ ಹೊಳೆ ಬೀದಿ ಶ್ರೀರೇಣುಕಾ ಎಲ್ಲಮ್ಮ ದೇವಿಯ 53ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಮಹಾ ಚಂಡಿಕಾ ಹೋಮ ಫೆ.12ರಂದು ನಡೆಯಲಿದೆ.ಜಾತ್ರಾ ಮಹೋತ್ಸವಕ್ಕೆ ಶ್ರೀರೇಣುಕಾ ಎಲ್ಲಮ್ಮ ದೇವಿ ಸೇವಾ ಟ್ರಸ್ಟ್ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಫೆ.12ರಂದು ಬೆಳಗ್ಗೆ 8.30ಕ್ಕೆ ಚಂಡಿಕಾ ಹೋಮ ಪ್ರಾರಂಭವಾಗಲಿದೆ. 11.30ಕ್ಕೆ ಪೂರ್ಣಆಹುತಿ ಕಾರ್ಯ ನೆರವೇರಲಿದೆ.
ಮಧ್ಯಾಹ್ನ 12.30ಕ್ಕೆ ಶ್ರೀಎಲ್ಲಮ್ಮ ದೇವಿ ಮೂಲ ವಿಗ್ರಹಕ್ಕೆ ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಹಾಗೂ ಮುತ್ತೈದೆ ಅವರಿಂದ ತಂಬಿಟ್ಟಿನ ಆರತಿ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.ಸಂಜೆ 6.30ಕ್ಕೆ ಶ್ರೀಎಲ್ಲಮ್ಮ ದೇವಿ ಉತ್ಸವ ಮೂರ್ತಿಯನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡಿ ಮಂಗಳವಾದ್ಯ ಹಾಗೂ ಜಾನಪದ ಆಕರ್ಷಕ ಕಲಾತಂಡಗಳ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.