ಸಾರಾಂಶ
ಕನ್ನಡಪ್ರಭ ವಾರ್ತೆ
ಹುಬ್ಬಳ್ಳಿ: ರಾಜ್ಯಾದ್ಯಂತ ತೀವ್ರ ಸದ್ದು ಮಾಡಿದ್ದ 31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟದ ವಿಚಾರವಾಗಿ ಬಂಧಿತ ಶ್ರೀಕಾಂತ ಪೂಜಾರಿಗೆ ಇಲ್ಲಿನ ಒಂದನೆಯ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಶುಕ್ರವಾರ ಮಧ್ಯಾಹ್ನ ಷರತ್ತು ಬದ್ಧ ಜಾಮೀನು ನೀಡಿದೆ.
ಆರೋಪಿ ಪರ ವಕೀಲರಾದ ಸಂಜಯ ಬಡಸ್ಕರ್ ಹಾಗೂ ಅಶೋಕ ಅಣ್ವೇಕರ್ ಜ. 3ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರತಿಯಾಗಿ ಶಹರ ಠಾಣೆ ಪೊಲೀಸರು ತಕರಾರು ಸರ್ಜಿ ಸಲ್ಲಿಸಿ ಆರೋಪಿಗೆ ಜಾಮೀನು ನೀಡದಂತೆ ವಿನಂತಿಸಿದ್ದರು. ಗುರುವಾರ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ಎರಡೂ ಕಡೆಯ ವಾದ ಆಲಿಸಿ ಆದೇಶ ಮುಂದೂಡಿದ್ದರು.
ಸರ್ಕಾರದ ಪರ ಬಿ.ಎನ್. ಅಮರಾವತಿ ಹಾಗೂ ಆರೋಪಿ ಪರ ವಕೀಲರಾದ ಸಂಜೀವ ಬಡಸ್ಕರ್ ಮತ್ತು ಅಶೋಕ ಅಣೇಕರ್ ವಾದ ಮಂಡಿಸಿದ್ದರು.
ಶುಕ್ರವಾರ ಮಧ್ಯಾಹ್ನ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. ಇಬ್ಬರಿಂದ ಜಾಮೀನು ಬೇಕು. ತಲಾ ಒಂದೊಂದು ಲಕ್ಷದಂತೆ ಎರಡು ಬಾಂಡ್ ಸಲ್ಲಿಸಬೇಕು. ಸಾಕ್ಷ್ಯ ನಾಶ ಮಾಡಬಾರದು. ನ್ಯಾಯಾಲಯದ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗಬೇಕೆಂದರೆ ನ್ಯಾಯಾಲಯದ ಅನುಮತಿ ಪಡೆಯಬೇಕು ಸೇರಿದಂತೆ ವಿವಿಧ ಷರತ್ತುಗಳನ್ನು ನ್ಯಾಯಾಲಯವೂ ವಿಧಿಸಿದೆ.
ನ್ಯಾಯಾಲಯದಿಂದ ಬಿಡುಗಡೆಯ ಆದೇಶದ ಪ್ರತಿ ಪಡೆದು ಉಪಕಾರಾಗೃಹಕ್ಕೆ ಹಾಜರುಪಡಿಸಬೇಕು. ನಂತರ ಆರೋಪಿ ಜಾಮೀನಿನ ಮೇಲೆ ಹೊರಗೆ ಬರುತ್ತಾರೆ ಎಂದು ವಕೀಲ ಸಂಜಯ ಬಡಸ್ಕರ್ ತಿಳಿಸಿದ್ದಾರೆ. ಸದ್ಯ ಆರೋಪಿ ಶ್ರೀಕಾಂತ ಹುಬ್ಬಳ್ಳಿಯ ಉಪಕಾರಾಗೃಹದಲ್ಲಿ ಇದ್ದಾರೆ.
ಏನಿದು ಪ್ರಕರಣ:
ಬಾಬರಿ ಮಸೀದಿ ನೆಲಸಮವಾಗುವ ಹಿಂದಿನ ದಿನ ಅಂದರೆ 1992ರ ಡಿಸೆಂಬರ್ 5ರಂದು ಹುಬ್ಬಳ್ಳಿಯಲ್ಲಿ ಗಲಭೆ ನಡೆದಿತ್ತು. ಆಗ ಅಡಕೆ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿತ್ತು. ಅದರ ಆರೋಪಿಗಳಲ್ಲಿ ಶ್ರೀಕಾಂತ ಪೂಜಾರಿ ಕೂಡ ಒಬ್ಬ. ದೀರ್ಘಾವಧಿಯಿಂದ ಬಾಕಿ ಉಳಿದ ಪ್ರಕರಣಗಳ (ಎಲ್‌ಪಿಆರ್) ಅಡಿಯಲ್ಲಿ ಡಿ. 29ರಂದು ಶ್ರೀಕಾಂತ ಪೂಜಾರಿ ಅವರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಸಮೀಪಿಸುತ್ತಿರುವಾಗ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಶ್ರೀಕಾಂತ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿತ್ತು. ಇದೀಗ ಕಾನೂನು ಪ್ರಕ್ರಿಯೆಯಡಿ ಅವರಿಗೆ ಜಾಮೀನು ದೊರೆತಿದೆ.