ಸಾರಾಂಶ
ಹುಬ್ಬಳ್ಳಿ: ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ ಪೂಜಾರಿ ಬಂಧನದ ವಿಷಯವನ್ನು ಬಿಜೆಪಿ ಲೋಕಸಭಾ ಚುನಾವಣೆಗೆ ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಗಂಭೀರವಾಗಿ ಆರೋಪಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಮೇರೆಗೆ ಪೊಲೀಸರು ಎಲ್‌ಪಿಆರ್ ಪ್ರಕರಣ ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ ಯಾವ ಕಾರಣಕ್ಕೂ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಸ್ಪೆಂಡ್ ಮಾಡುವ ಮಾತಿಲ್ಲ ಎಂದರು.ಬಿಜೆಪಿಗೆ ನಾಚಿಗೆಯಾಗಬೇಕು: ಇನ್ಸಪೆಕ್ಟರ್ ಎಂ.ಎಂ. ತಹಶೀಲ್ದಾರ್ ಒಬ್ಬ ಖಡಕ್ ಅಧಿಕಾರಿ. ರೌಡಿಸಂ ವಿರುದ್ಧ ತಮ್ಮ ದಕ್ಷತೆ ತೋರಿಸಿದ್ದಾರೆ. ಅವರೊಬ್ಬ ಜಾತ್ಯತೀತ ಅಧಿಕಾರಿ. ಈ ಹಿಂದೆ ಹುಕ್ಕೇರಿಯಲ್ಲಿ ಠಾಣೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ತಮ್ಮ ಧಾರ್ಮಿಕ ಮನೋಭಾವ ಏನೆಂಬುದು ತೋರಿಸಿದ್ದಾರೆ. ಇದನ್ನು ನೋಡಿಯಾದರೂ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.
ಕಡ್ಡಾಯ ರಜೆ ನೀಡಿಲ್ಲ: ಇದೀಗ ಇನ್ಸಪೆಕ್ಟರ್ ವಿರುದ್ಧ ಬಿಜೆಪಿಯವರು ಸುಖಾ ಸುಮ್ಮನೆ ಮುಗಿಬೀಳುತ್ತಿದ್ದಾರೆ. ಅವರನ್ನು ಯಾವುದೇ ಕಡ್ಡಾಯ ರಜೆಯ ಮೇಲೆ ಕಳಿಸಿಲ್ಲ, ಅವರು ತಮ್ಮ ವೈಯಕ್ತಿಕ ಕಾರಣಕ್ಕಾಗಿ ರಜೆ ಪಡೆದುಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ರೀತಿಯ ಕಡ್ಡಾಯ ರಜೆ ಕೊಟ್ಟಿಲ್ಲ ಎಂದರು.ಇವರು ರಾಮಭಕ್ತರಾ? : ಶ್ರೀಕಾಂತ ಪೂಜಾರಿ ಮೇಲೆ ಈಗಾಗಲೇ ವಿವಿಧ ಠಾಣೆಗಳಲ್ಲಿ 16 ಪ್ರಕರಣಗಳಿವೆ. ಅಕ್ರಮವಾಗಿ ಮದ್ಯ ಮಾರುವವರು, ಮಟ್ಕಾ, ಜೂಜಾಟ ಆಡುವವರು ರಾಮನ ಭಕ್ತರಾ? ಎಂದು ಖಾರವಾಗಿ ಪ್ರಶ್ನಿಸಿದ ಅಬ್ಬಯ್ಯ, ಅಂಥವರ ಪರವಾಗಿ ಬಿಜೆಪಿ ನಿಂತು ಹೋರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇದರಿಂದ ಬಿಜೆಪಿ ತತ್ವ, ಸಿದ್ಧಾಂತ ಏನೆಂಬುದು ಗೊತ್ತಾಗುತ್ತದೆ. ಬಿಜೆಪಿಯವರು ರೌಡಿಶೀಟರ್‌ಗಳು ತಮ್ಮ ಪಕ್ಷದ ಪಿಲ್ಲರ್‌ಗಳೆಂದು ಒಪ್ಪಿಕೊಳ್ಳಲಿ, ನಾವು ಅವರ ಹೋರಾಟ ಒಪ್ಪಿಕೊಳ್ಳುತ್ತೇವೆ ಎಂದರು.
ರಾಜ್ಯಾದ್ಯಂತ ಹೋರಾಟ: ಇನ್ಸಪೆಕ್ಟರ್ ಅಮಾನತು ಕುರಿತು ಬಿಜೆಪಿಯ ಗೊಡ್ಡು ಬೆದರಿಕೆಗೆ ಸರ್ಕಾರ ಹೆದರುವ ಪ್ರಶ್ನೆಯಿಲ್ಲ. ಹೀಗೆ ಮುಂದುವರೆದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿಜೆಪಿಯ ಕುತಂತ್ರ ನಾವು ಒಪ್ಪಿಕೊಳ್ಳುವುದಿಲ್ಲ ಎಂದರು.