ಕೊಪ್ಪಳ ಬಂದ್‌ ಬೆಂಬಲಿಸಲು ಶ್ರೀಕಂಠ ಶ್ರೀ ಕರೆ

| Published : Feb 21 2025, 11:48 PM IST

ಸಾರಾಂಶ

ಗಿಣಗೇರಿ ಗ್ರಾಮದ ಸುತ್ತಮುತ್ತಲೂ ಸಾಕಷ್ಟು ಕಾರ್ಖಾನೆಗಳಿವೆ. ಆದರೆ, ಧೂಳು ಹಾಗೂ ತ್ಯಾಜ್ಯವನ್ನು ಅನುಭವಿಸುತ್ತಿದ್ದೇವೆ. ಮತ್ತೊಂದು ಕೈಗಾರಿಕೆ ನಮ್ಮಲ್ಲಿ ಬಂದರೆ ನಮ್ಮ ಆರೋಗ್ಯ- ಪರಿಸರದ, ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳ ಮೇಲೆ ಅಗಾಧವಾದ ಕೆಟ್ಟ ಪರಿಣಾಮ ಬೀರಲಿದೆ.

ಕೊಪ್ಪಳ:

ಕೊಪ್ಪಳವು ಜೈನರ ಕಾಶಿ, ಭತ್ತದ ನಾಡು, ಶರಣರ ಭಕ್ತಿಯ ಬೀಡು. ಇಂದು ಧೂಳಿನ ನಾಡಾಗುತ್ತಿದ್ದು, ಇದನ್ನು ತಡೆಯಲು ಗವಿಸಿದ್ಧೇಶ್ವರ ಸ್ವಾಮೀಜಿ ಸೇರಿದಂತೆ ಹಲವು ಸಂಘಟನೆಗಳು ಹೊಸ ಕೈಗಾರಿಕೆ ಸ್ಥಾಪನೆ ವಿರೋಧಿಸಿ ಫೆ. ೨೪ರಂದು ಕೊಪ್ಪಳ ಬಂದ್ ಕರೆ ನೀಡಿದ್ದಾರೆ. ಪ್ರತಿಯೊಬ್ಬ ನಾಗರಿಕರು ನಮ್ಮ ಬದುಕಿಗಾಗಿ ಬಂದ್‌ನಲ್ಲಿ ಪಾಲ್ಗೊಳ್ಳಬೇಕು. ನಾವೂ ಪಾಲ್ಗೊಳ್ಳಲಿದ್ದೇವೆ ಎಂದು ಗಿಣಗೇರಿಯ ಆನೆಗೊಂದಿ ಸಂಸ್ಥಾನದ ಶ್ರೀಕಂಠ ಸ್ವಾಮೀಜಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಗವಿಸಿದ್ಧೇಶ್ವರ ಸ್ವಾಮೀಜಿಗಳೆಂಬ ಜಲಋಷಿಯ ಜಾಗೃತಿ ಕರೆ ಕಾರ್ಖಾನೆ ತೊರೆ, ಹಸಿರು ಊರ ಮೆರೆ ಎನ್ನುವುದಾಗಿದೆ. ಕೊಪ್ಪಳದ ಸುತ್ತಮುತ್ತಲೂ ಹಲವಾರು ಕೈಗಾರಿಕೆಗಳು ರಾರಾಜಿಸುತ್ತಿವೆ. ಆದರೆ, ಇನ್ನೂ ಕೈಗಾರಿಕೆಗಳು ಬಂದರೆ ಇಲ್ಲಿ ಹಸಿರು ಬದಲು ಜನರ ಕೈಯಲ್ಲಿ ರೊಕ್ಕವಾಡುವ ಬದಲು ಅನಾರೋಗ್ಯ ತಾಂಡವಾಡಲಿದೆ ಎಂದು ಹೇಳಿದ್ದಾರೆ.

ಗಿಣಗೇರಿ ಗ್ರಾಮದ ಸುತ್ತಮುತ್ತಲೂ ಸಾಕಷ್ಟು ಕಾರ್ಖಾನೆಗಳಿವೆ. ಆದರೆ, ಧೂಳು ಹಾಗೂ ತ್ಯಾಜ್ಯವನ್ನು ಅನುಭವಿಸುತ್ತಿದ್ದೇವೆ. ಮತ್ತೊಂದು ಕೈಗಾರಿಕೆ ನಮ್ಮಲ್ಲಿ ಬಂದರೆ ನಮ್ಮ ಆರೋಗ್ಯ- ಪರಿಸರದ, ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳ ಮೇಲೆ ಅಗಾಧವಾದ ಕೆಟ್ಟ ಪರಿಣಾಮ ಬೀರಲಿದೆ. ಆದರಿಂದ ನಾವು ಎಲ್ಲ ಭೇದ ಮರೆತು ಸದ್ಭಾವದಿಂದ ಒಂದುಗೂಡಿ ಬಂದ್‌ನಲ್ಲಿ ಪಾಲ್ಗೊಂಡು ಕೊಪ್ಪಳ ತಾಲೂಕು, ಜಿಲ್ಲೆಯನ್ನು ಹಸಿರು ಕ್ರಾಂತಿಯ ಕಡೆ ಮುನ್ನಡೆಸಬೇಕಿದೆ. ಇದು ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮವಲ್ಲ, ಗುರುವಿನ ಮಂತ್ರದಿಂದ ಹೊರಡುವ ಕಾರ್ಯಕ್ರಮವಾಗಿದೆ. ಗವಿಶ್ರೀಗಳ ಕರೆಗೆ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.