ನಾಗಮಂಗಲ ಪಟ್ಟಣದಲ್ಲಿ ಇಂದು ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆ

| Published : Oct 25 2024, 12:48 AM IST / Updated: Oct 25 2024, 12:49 AM IST

ಸಾರಾಂಶ

ಕಳೆದ ಸೆ.11ರ ರಾತ್ರಿ ಪಟ್ಟಣದಲ್ಲಿ ಬದರಿಕೊಪ್ಪಲಿನ ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಕೋಮುಗಲಭೆಯಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಅ.25ರ ಮಧ್ಯಾಹ್ನದಿಂದ ರಾತ್ರಿವರೆಗೂ ಡಿ.ಜೆ.ಸೌಂಡ್, ಮಂಗಳವಾದ್ಯ, ಡೊಳ್ಳು ಕುಣಿತ, ತಮಟೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ನಡೆಯುವ ಶ್ರೀಕೋಟೆ ವಿದ್ಯಾಗಣಪತಿ ಮೆರವಣಿಗೆಗೆ ಯಾವುದೇ ಭಂಗವುಂಟಾಗಬಾರದೆಂಬ ದೃಷ್ಟಿಯಿಂದ ಅಗತ್ಯ ಕ್ರಮಕ್ಕೆ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆ (ಅ.25) ಶುಕ್ರವಾರ ಪಟ್ಟಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಹಿಂದೆಂದೂ ಮಾಡದಂತಹ ಸಾವಿರಾರು ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕಳೆದ ಸೆ.11ರ ರಾತ್ರಿ ಪಟ್ಟಣದಲ್ಲಿ ಬದರಿಕೊಪ್ಪಲಿನ ಗಣೇಶಮೂರ್ತಿ ಮೆರವಣಿಗೆ ವೇಳೆ ಉಂಟಾದ ಕೋಮುಗಲಭೆಯಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಅ.25ರ ಮಧ್ಯಾಹ್ನದಿಂದ ರಾತ್ರಿವರೆಗೂ ಡಿ.ಜೆ.ಸೌಂಡ್, ಮಂಗಳವಾದ್ಯ, ಡೊಳ್ಳು ಕುಣಿತ, ತಮಟೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ನಡೆಯುವ ಶ್ರೀಕೋಟೆ ವಿದ್ಯಾಗಣಪತಿ ಮೆರವಣಿಗೆಗೆ ಯಾವುದೇ ಭಂಗವುಂಟಾಗಬಾರದೆಂಬ ದೃಷ್ಟಿಯಿಂದ ಅಗತ್ಯ ಕ್ರಮಕ್ಕೆ ಮುಂದಾಗಿದೆ.

ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ಮೈಸೂರು ರಸ್ತೆ, ಕೆಎಸ್‌ಟಿ ರಸ್ತೆ, ಕೆಪಿಟಿ ರಸ್ತೆ, ಪಡುವಲಪಟ್ಟಣ ರಸ್ತೆ ಹಾಗೂ ಗಣೇಶಮೂರ್ತಿ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳಲ್ಲಿ ಒಟ್ಟು 40ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿ ಪಟ್ಟಣದಾದ್ಯಂತ ಪೊಲೀಸರ ಹದ್ದಿನ ಕಣ್ಣಿರಿಸಲಾಗಿದೆ.

ಗುರುವಾರ ಮಧ್ಯಾಹ್ನ ಪುರಸಭೆ ಸೂಪರ್‌ ಮಾರ್ಕೆಟ್ ವಾಣಿಜ್ಯ ಮಳಿಗೆ ಕಟ್ಟಡದ ಒಳಾಂಗಣದಲ್ಲಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಭೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು.

ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಕೋಟೆ ವಿದ್ಯಾಗಣಪತಿ ಮೂರ್ತಿಯನ್ನು ಶುಕ್ರವಾರ ವಿಸರ್ಜನೆ ಮಾಡಲಾಗುತ್ತಿದೆ. ಇದಕ್ಕೂ ಮುನ್ನ ನಡೆಯುವ ಮೆರವಣಿಗೆ ವೇಳೆ ಯಾವುದೇ ಸಣ್ಣ ಪುಟ್ಟ ಅಹಿಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ವಿಶೇಷ ನಿಗಾವಹಿಸಬೇಕು ಎಂದು ಸೂಚಿಸಿದರು.

ನಂತರ ಗಣೇಶಮೂರ್ತಿ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಪಥಸಂಚಲನ ನಡೆಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಗಣೇಶ ಮೆರವಣಿಗೆ ವೇಳೆ ಜನರ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು. ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದರು.

2 ಡ್ರೋನ್, 40 ಸಿಸಿ ಕ್ಯಾಮೆರಾ:

ಗಣೇಶ ಮೂರ್ತಿ ಮೆರವಣಿಗೆ ಹಾಗೂ ವಿಸರ್ಜನೆಗಾಗಿ ಪಟ್ಟಣದಾದ್ಯಂತ ಹದ್ದಿನ ಕಣ್ಣಿಟ್ಟಿರುವ ಪೊಲೀಸ್ ಇಲಾಖೆ, ಎಲ್ಲಾ ಚಲನವಲನಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ ಮೆರವಣಿಗೆ ಸಾಗುವ ಎಲ್ಲಾ ರಸ್ತೆಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ 40 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಜೊತೆಗೆ 15 ವೀಡಿಯೋ ಮತ್ತು 2 ಡ್ರೋನ್ ಕ್ಯಾಮೆರಾಗಳನ್ನೂ ಕೂಡ ಬಳಸಲಾಗುತ್ತಿದೆ.

ಅಂಗಡಿ ಮುಂಗಟ್ಟುಗಳು ಬಂದ್ ಸಾಧ್ಯತೆ!

ಶುಕ್ರವಾರ ಶ್ರೀ ಕೋಟೆ ವಿದ್ಯಾಗಣಪತಿ ವಿಸರ್ಜನೆ ಹಿನ್ನಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಇದರಿಂದ ಮುನ್ನೆಚ್ಚರಿಕೆಯಾಗಿ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆಯಿದೆ. ಗುರುವಾರವೇ ವಾರದ ಸಂತೆ ನಡೆದಿರುವುದರಿಂದ ಶುಕ್ರವಾರದ ವಾರದ ಸಂತೆಯೂ ನಡೆಯುವುದಿಲ್ಲ ಎನ್ನಲಾಗುತ್ತಿದೆ.

ಸಾವಿರಕ್ಕೂ ಹೆಚ್ಚು ಪೊಲೀಸರು:

ಗಣೇಶಮೂರ್ತಿ ವಿಸರ್ಜನೆಗೂ ಮುನ್ನ ನಡೆಯುವ ಮೆರವಣಿಗೆಯ ಬಂದೋಬಸ್ತ್‌ಗಾಗಿ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿ ತಿಮ್ಮಯ್ಯ ನೇತೃತ್ವದಲ್ಲಿ 6 ಮಂದಿ ಡಿವೈಎಸ್‌ಪಿ, 15 ಮಂದಿ ಸಿಪಿಐ, 40 ಮಂದಿ ಪಿಎಸ್‌ಐ, 5 ಕೆಎಸ್‌ಆರ್‌ಪಿ ತುಕಡಿ,5೫ ಡಿಆರ್, 450 ಮಂದಿ ಪೊಲೀಸ್, 100ಕ್ಕೂ ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಸೇರಿ ಒಟ್ಟು 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

ಮದ್ಯಮಾರಾಟ ನಿಷೇಧ

ನಾಗಮಂಗಲ ಪಟ್ಟಣದಲ್ಲಿ ಶುಕ್ರವಾರ ನಡೆಯುವ ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನೆಗೂ ಮುನ್ನ ನಡೆಯುವ ಮೆರವಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಸೇರುವ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅ.25ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಅ.26ರ ಶನಿವಾರ ಬೆಳಿಗ್ಗೆ 6 ಗಂಟೆವರೆಗೆ ತಾಲೂಕಿನಾದ್ಯಂತ ಎಲ್ಲಾ ಮಾದರಿಯ ಮದ್ಯದಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವ ಜೊತೆಗೆ ಮದ್ಯ ಮಾರಾಟ, ಸಾಗಾಣಿಕೆ ಹಾಗೂ ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.

ವಾಹನ ಸಂಚಾರದ ಮಾರ್ಗ ಬದಲಾವಣೆ

ಶುಕ್ರವಾರ ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ಮೈಸೂರು ಕಡೆಯಿಂದ ನಾಗಮಂಗಲ ಪಟ್ಟಣ ಕಡೆಗೆ ಬರುವ ಎಲ್ಲಾ ವಾಹನಗಳು ಪಟ್ಟಣದ ಹೊರವಲಯ ಕೆ.ಮಲ್ಲೇನಹಳ್ಳಿಯಿಂದ ಮಾರ್ಗಬದಲಿಸಿ ಕೆ.ಆರ್.ಪೇಟೆ ರಸ್ತೆಯ ಬಂಕಾಪುರ, ಶಿವನಹಳ್ಳಿ ಗೇಟ್ ಮೂಲಕ ಟಿ.ಬಿ.ಬಡಾವಣೆಗೆ ಬಂದು ಬೆಳ್ಳೂರು ಕಡೆಗೆ ತೆರಳುವಂತೆ ಹಾಗೂ ಬೆಳ್ಳೂರು ಕಡೆಯಿಂದ ನಾಗಮಂಗಲಕ್ಕೆ ಬರುವ ಎಲ್ಲಾ ವಾಹನಗಳು ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಿಂದ ಮಾರ್ಗಬದಲಿಸಿ ಬಿಂಡಿಗನವಿಲೆ ರಸ್ತೆಯ ಶಿವನಹಳ್ಳಿ ಗೇಟ್, ಬಂಕಾಪುರ, ಕೆ.ಮಲ್ಲೇನಹಳ್ಳಿ ಮಾರ್ಗವಾಗಿ ಮೈಸೂರು ಕಡೆಗೆ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.