ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ವಿಶ್ವವಿಖ್ಯಾತ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿ ಮೊಸರು ಕುಡಿಕೆ ಒಡೆಯುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಸಂಜೆ ಇಲ್ಲಿನ ಯಾದವ ಜನಾಂಗದ ಪ್ರಮುಖರ ನೇತೃತ್ವದಲ್ಲಿ ಚೆನ್ನಕೇಶವ ಸ್ವಾಮಿ ಮತ್ತು ಶ್ರೀ ಕೃಷ್ಣನ ಎಂಟು ಬೀದಿಯಲ್ಲಿ ಉತ್ಸವ ನಡೆಸಿದರು. ಪಟಾಕಿ ಸಿಡಿಸಿದರು. ಬಳಿಕ ದೇಗುಲದ ಮುಂದೆ ಕುರುಜಿ ಮಂಟಪವನ್ನು ಸಾಂಕೇತಿಕವಾಗಿ ನಿರ್ಮಿಸಿ ಎತ್ತರದಲ್ಲಿ ಮೊಸರು ಹಾಲು ಬೆಣ್ಣೆ ಮತ್ತು ನವಧಾನ್ಯಗಳು ತುಂಬಿದ ಕಟ್ಟಲಾಗುತ್ತದೆ. ಇದನ್ನು ಕಂಸವಧೆ ಎನ್ನಲಾಗುತ್ತದೆ. ಕುರುಜಿ ಮಂಟಪದ ಬಳಿ ಇಪ್ಪತ್ತಕ್ಕೂ ಹೆಚ್ಚಿನ ಯುವಕರು ಕೃಷ್ಣ ಮತ್ತು ಚೆನ್ನಕೇಶವ ಸ್ವಾಮಿಗೆ ಘೋಷಣೆ ಹಾಕುತ್ತಾ ಮಂಟಪವನ್ನು ಪ್ರದಕ್ಷಿಣೆ ಹಾಕಿ ಒಬ್ಬರ ಮೇಲೆ ಒಬ್ಬರು ನಿಂತು ಎತ್ತರವಾದ ಮೊಸರು ಹಾಲು ಬೆಣ್ಣೆ ಮತ್ತು ನವಧಾನ್ಯಗಳ ಗಡಿಗೆ ಕೈ ಹಾಕಿ ಕೂಡುಗೋಲಿನಿಂದ ಐದು ಗಡಿಗೆಗಳನ್ನು ಹೊಡೆಯುವ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮಂಗಳೊಂದಿಗೆ ಸಂಪನ್ನಗೊಳ್ಳುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತಾಲೂಕು ಯಾದವ ಸಂಘದಿಂದ ಶ್ರೀ ಕೃಷ್ಣ ವೇಶಭೂಷಣ ಹಾಕಿದ ಪುಟ್ಟ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಸಾವಿರಾರು ಭಕ್ತರಿಗೆ ಪುಳಿಯೋಗರೆ ಪ್ರಸಾದವನ್ನು ವಿತರಿಸಲಾಯಿತು. ಈ ಎಲ್ಲಾ ಪೂಜಾ ಕಾರ್ಯವನ್ನು ದೇಗುಲದ ಅರ್ಚಕರಾದ ಶ್ರೀನಿವಾಸ ಸ್ವಾಮಿ ಭಟ್ಟರು ಮತ್ತು ನರಸಿಂಹ ಭಟ್ಟರ್ ಇನ್ನಿತರ ಆಗಮಿಕರು ನಡೆಸಿಕೊಟ್ಟರು.ತಹಸೀಲ್ದಾರ್ ಎಂ ಮಮತಾ, ದೇಗುಲ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮತ್ತು ಇಒ ಯೋಗೀಶ್, ಪುರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ, ತಾಲೂಕು ಯಾದವ ಸಂಘದ ಅಧ್ಯಕ್ಷ ರಮೇಶ್, ಪದಾಧಿಕಾರಿಗಳಾದ ಎಸ್ ಕೆ ನಾಗೇಶ್, ಬಿ.ಸಿ ಆನಂದ್, ಪುರುಷೋತ್ತಮ್, ಆಡಿಟರ್ ಕೃಷ್ಣಮೂರ್ತಿ, ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ ಇತರರು ಇದ್ದರು.