ದೊಡ್ಡಬಳ್ಳಾಪುರದ ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

| Published : Aug 28 2024, 12:48 AM IST

ಸಾರಾಂಶ

ಇಲ್ಲಿನ ವಿವಿಧ ಶಾಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೋಮವಾರ ಏರ್ಪಡಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ನೂರಾರು ಮಕ್ಕಳು ರಾಧೆ, ಕೃಷ್ಣ ಮತ್ತು ರುಕ್ಮಿಣಿಯರ ವೇಷ ಧರಿಸಿ ಸಂಭ್ರಮಿಸಿದರು.

ದೊಡ್ಡಬಳ್ಳಾಪುರ: ಇಲ್ಲಿನ ವಿವಿಧ ಶಾಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೋಮವಾರ ಏರ್ಪಡಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ನೂರಾರು ಮಕ್ಕಳು ರಾಧೆ, ಕೃಷ್ಣ ಮತ್ತು ರುಕ್ಮಿಣಿಯರ ವೇಷ ಧರಿಸಿ ಸಂಭ್ರಮಿಸಿದರು.

ಅಭಿನೇತ್ರಿ ಸಾಂಸ್ಕೃತಿಕ ಶಾಲೆಯಲ್ಲಿ ನಂದಗೋಕುಲ: ನಗರದ ಅಭಿನೇತ್ರಿ ಸಾಂಸ್ಕೃತಿಕ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪುಟಾಣಿಗಳು ಕೃಷ್ಣ ಹಾಗೂ ರಾಧೆಯ ವೇಷಧಾರಿಗಳಾಗಿ ಮುದ್ದು ಮುದ್ದಾಗಿ ಮಾತನಾಡುವ ಮೂಲಕ ಶ್ರೀಕೃಷ್ಣನ ಲೀಲೆಗಳನ್ನು ಉಣಬಡಿಸಿದರು. ನೃತ್ಯ ನಾಟಕ, ಸಂಭಾಷಣೆ, ಶ್ಲೋಕ ಪಠಣ, ಹಾಡು, ಭಾಷಣ, ಛದ್ಮವೇಷ ಮುಂತಾದ ಕಾರ್ಯಕ್ರಮಗಳು ನಡೆದವು.

ನಾಟ್ಯ ಮಯೂರಿ ಶಾಲೆಯಲ್ಲಿ ರಾಧೆ-ಕೃಷ್ಣರ ನೃತ್ಯ: ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಇಲ್ಲಿನ ನಾಟ್ಯ ಮಯೂರಿ ಕಲಾ ಕೇಂದ್ರ ನೃತ್ಯ ತರಬೇತಿ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಪ್ರಮುಖರು, ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಸಹ ಕರೆಯುತ್ತಾರೆ. ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಧೆ, ತುಂಟ ಕೃಷ್ಣನ ರೀತಿಯ ಉಡುಗೆಗಳನ್ನು ತೊಟ್ಟು ಕೃಷ್ಣನ ಗೀತೆಗಳಿಗೆ ನೃತ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ವಿವಿಧ ಶಾಲೆಗಳಲ್ಲಿ ಸಂಭ್ರಮ: ಇಲ್ಲಿನ ಶ್ರೀ ದೇವರಾಜ ಅರಸ್‌ ಅಂತಾರಾಷ್ಟ್ರೀಯ ವಸತಿ ಶಾಲೆ, ಎಂಎಸ್‌ವಿ ಶಾಲೆ, ಅಕ್ಷರ ಪಬ್ಲಿಕ್ ಶಾಲೆ, ತಾಲೂಕಿನ ಮೆಳೇಕೋಟೆ ಕ್ರಾಸ್‌ನಲ್ಲಿರುವ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ, ಗ್ರಾಮಾಂತರ ವಿದ್ಯಾನಿಕೇತನ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಪುಟಾಣಿ ಮಕ್ಕಳಿಂದ ಕೃಷ್ಣ, ರಾಧೆ ವೇಷಭೂಷಣ ಪ್ರದರ್ಶನ, ಕೃಷ್ಣನ ಬಾಲಲೀಲಾ ವಿನೋದಗಳ ಪರಿಚಯ ಕಾರ್ಯಕ್ರಮ ಜರುಗಿತು.