ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಅಡಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯ ಶೀಳನೆರೆ ಅಂಬರೀಶ್ ಹೇಳಿದರು.ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ನಿವೃತ್ತಿ ಹೊಂದಿದ ಯೋಜನೆ ಪ್ರಾದೇಶಿಕ ನಿರ್ದೇಶಕ ಜಯರಾಂ ನೆಲ್ಲಿತ್ತಾಯ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಜನೆ ಆರ್ಥಿಕ ಚಟುವಟಿಕೆಗಳು ಹಳ್ಳಿಗಳಲ್ಲಿ ಪ್ರಗತಿದಾಯಕವಾಗಿವೆ. ಮೀಟರ್ ಬಡ್ಡಿ ದಂದೆ ನಿಯಂತ್ರಣಕ್ಕೆ ಬಂದಿದ್ದು ಖಾಸಗಿ ಫೈನಾನ್ಸ್ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ. ಒಂದು ಸರ್ಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಜಯರಾಂ ನೆಲ್ಲಿತ್ತಾಯ ಸೇವಾ ಕಾರ್ಯಕ್ರಮಗಳನ್ನು ಸ್ಮರಿಸಿದರು. ಸೇವಾ ನಿವೃತ್ತಿ ಹೊಂದಿದ ಜಯರಾಂ ನೆಲ್ಲಿತ್ತಾಯ ಹಾಗೂ ವರ್ಗಾವಣೆಗೊಂಡ ಜಿಲ್ಲಾ ಯೋಜನಾಧಿಕಾರಿ ಕೇಶವ ದೇವಾಂಗ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ತಾಲೂಕಿನ ಹಾದನೂರು ಮತ್ತು ರಾಜೇನಹಳ್ಳಿ ಮಹಿಳಾ ಡೇರಿ ಸಂಘಗಳಿಗೆ ತಲಾ 1.5 ಲಕ್ಷ ರೂ, ಎಂ.ಹೊಸೂರು, ಮಾಚಹೊಳಲು, ರಾಜೇನಹಳ್ಳಿ, ಗಂಜೀಗೆರೆ ಮತ್ತು ಗುಡುಗನಹಳ್ಳಿ ಮಹಿಳಾ ಸಡೇರಿಗಳಿಗೆ ತಲಾ 2 ಲಕ್ಷ ರು ಗಳ ಸಹಾಯ ಧನವನ್ನು ವಿತರಿಸಲಾಯಿತು.ದೇವಾಲಯ ಜೀರ್ಣೋದ್ಧಾರ ಅನುದಾನ ಯೋಜನೆಯಡಿ ದೊಡ್ಡಗಾಡಿನಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯಕ್ಕೆ 2 ಲಕ್ಷ, ಬೀರುವಳ್ಳಿ ಕನ್ನಂಬಾಡಮ್ಮ ದೇವಾಲಯ, ಚೌಡ ಸಮುದ್ರದ ಶ್ರೀಲಕ್ಷ್ಮೀ ದೇವಿ ದೇವಾಲಯ, ರಾಜೇನಹಳ್ಳಿ ಕಾಲಭೈರವೇಶ್ವರ ದೇವಾಲಯ, ಜಿ.ಜಿ.ಕೊಪ್ಪಲು ಪಟ್ಟಲದಮ್ಮ ದೇವಾಲಯಗಳಿಗೆ ತಲಾ 1 ಲಕ್ಷ, ಹೊಸಹೊಳಲು ಕೋಟೆ ಭೈರವೇಶ್ವರ ದೇವಾಲಯಕ್ಕೆ 2.5 ಲಕ್ಷ, ಕಲ್ಲಹಳ್ಳಿ ದೇವಾಲಯ ಜೀರ್ಣೋದ್ದಾರ ಸಮಿತಿಗೆ 50 ಸಾವಿರ ಹಾಗೂ ಕೆ.ಆರ್.ಪೇಟೆ ವಿಶ್ವಕರ್ಮ ಕುಶಲ ಕೈಗಾರಿಕಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ಮೂಲಕ 2 ಲಕ್ಷ ರು ಸಹಾಯ ಧನದ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ತಿಲಕ್ ರಾಜ್, ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಎಸ್.ರಾಜೇಶ್, ಪ್ರಸನ್ನ, ಜ್ಯೋತಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂಕೆ.ಹರಿಚರಣತಿಲಕ್ ಇದ್ದರು.