ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಧರ್ಮಸ್ಥಳವು ನಾಡಿನ ಪ್ರಾಚೀನ ಪರಂಪರೆಯ ಸುಕ್ಷೇತ್ರವಾಗಿರದೇ ಆರ್ಥಿಕವಾಗಿ ದುರ್ಬಲವಾದವರಿಗೆ ಶಿಕ್ಷಣ ಮತ್ತು ಆರೋಗ್ಯ ಸಂವರ್ಧನೆಗೆ ಉತ್ತೇಜನ ನೀಡಲಾಗುತ್ತಿದೆ. ಹಲವಾರು ಸ್ವಸಹಾಯ ಸಂಘಟನೆಗಳಿಗೆ ಸಬಲೀಕರಣ ಪ್ರಶಿಕ್ಷಣ ನೀಡುವ ಮೂಲಕ ಹಲವಾರು ಬಡ ಕುಟುಂಬಗಳು ಸ್ವಾವಲಂಬಿಯಾಗಲು ಧರ್ಮಸ್ಥಳ ಮಂಜುನಾಥ ದೇವಸ್ಥಾನ ಮತ್ತು ಅದರ ಟ್ರಸ್ಟ್ ನೆರವಾಗುತ್ತಿದೆ ಎಂದು ಲೇಖಕ ಮತ್ತು ಚಿಂತಕ ರೋಹಿತ ಚಕ್ರತೀರ್ಥ ಹೇಳಿದರು.ನಗರದ ಮಹಾವೀರ ಸಭಾಭವನದಲ್ಲಿ ಶುಕ್ರವಾರ ಪ್ರಬುದ್ಧ ಭಾರತದ ನೇತೃತ್ವದಲ್ಲಿ ಜರುಗಿದ ಧರ್ಮಸ್ಥಳ ರಹಸ್ಯಬೇಧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 6 ಲಕ್ಷ ಸ್ವಸಹಾಯ ಸಂಘಟನೆಗಳ 50 ಲಕ್ಷ ಸದಸ್ಯರಿಗೆ ನೆರವು ನೀಡುವ ಗ್ರಾಮೀಣಾಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆ ತರುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಟನೆಯು ₹25 ಸಾವಿರ ಕೋಟಿ ಸಾಲ ನೀಡುವುದರ ಮೂಲಕ ಹಲವಾರು ಯುವಕ, ಯುವತಿಯರಿಗೆ ಸ್ವಾವಲಂಬನೆಯ ಬದುಕು ರೂಪಿಸಲು ಅವಕಾಶ ನೀಡಿದೆ. ಹಲವಾರು ಜನಪರ ಕಾರ್ಯದಲ್ಲಿ ತೊಡಗಿದ ಧರ್ಮಸ್ಥಳದ ಕಳಂಕ ತರುವ ದುಷ್ಟ ಕಾರ್ಯ ವ್ಯವಸ್ಥಿತವಾಗಿ ಜರುಗುತ್ತಿರುವುದು ಸೋಜಿಗದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ನಾಡಿನಲ್ಲಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳೆಲ್ಲವೂ ಸರ್ಕಾರದ ಮುಜರಾಯಿ ಇಲಾಖೆ ಸುಪರ್ದಿಯಲ್ಲಿವೆ. ಆದರೆ, ಧರ್ಮಸ್ಥಳದ ಮಂಜುನಾಥ ದೇವಾಲಯವು ಸರ್ಕಾರದ ಸುಪರ್ದಿಯಲ್ಲಿಲ್ಲ. ಆದರೂ ಕೂಡಾ ಸರ್ಕಾರವೇ ಕೈಗೊಳ್ಳಲಾಗದ ಅನೇಕ ಜನಪರ ಕಾರ್ಯಕ್ರಮಗಳನ್ನು ಯೋಜನೆಗಳನ್ನು ಮಂಜುನಾಥ ದೇವಾಲಯದ ಟ್ರಸ್ಟ್ ಮೂಲಕ ನಡೆಸಲಾಗುತ್ತಿದೆ. ಶೈಕ್ಷಣಿಕ, ಆರ್ಥಿಕ, ಕೃಷಿ, ಸಾಹಿತ್ಯ ಮತ್ತು ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ಸಕಾರಾತ್ಮಕ ಸಂಗತಿಗಳನ್ನು ಸಹಿಸದ ಕೆಲವರು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರಚಿಸಿ, ಹಿಂದೂಗಳ ನಂಬಿಕೆಗಳಿಗೆ ಮತ್ತು ಭಾವನೆಗಳಿಗೆ ಧಕ್ಕೆ ತರಲಾಗುತ್ತಿದೆ ಎಂದರು.ಪತ್ರಕರ್ತ ವಸಂತ ಗಿಳಿಯಾರ್ ಮಾತನಾಡಿ, ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ಸುಕ್ಷೇತ್ರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಭಾರತ ಅತ್ಯಾಚಾರ ಪ್ರಕರಣ ಮತ್ತು ಶಿಕ್ಷೆಯ ಪ್ರಮಾಣ ಅವಲೋಕನ ನಡೆಸಿದಾಗ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇ.20ಕ್ಕಿಂತ ಕಡಿಮೆಯಿದೆ. ಆದರೂ ಕೂಡಾ ಸೌಜನ್ಯ ಪ್ರಕರಣ ಮಾತ್ರ ಏಕೆ ಬಹಳ ಸುದ್ದಿ ಮಾಡಿರುವ ಹಿಂದಿನ ಹುನ್ನಾರವನ್ನು ಎಲ್ಲರೂ ಅರಿಯಬೇಕು ಎಂದರು.
ಹಿಂದೂ ವಿರೋಧಿ ಮತ್ತು ಕಮ್ಯೂನಿಷ್ಟ ವಿಚಾರಧಾರೆಯ ಕೆಲವರು ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಿದ್ದಾರೆ. ಮಹೇಶ ತಿಮರೊಡ್ಡಿ, ಗಿರೀಶ ಮಟ್ಟೆನ್ನವರ, ಚಿನ್ನಯ್ಯ ಮತ್ತು ಶೈಲಜಾ ಭಟ್ ಹೀಗೆ ಅನೇಕರು ಸುಳ್ಳು ಆರೋಪದ ಕಥೆಗಳನ್ನು ಹಬ್ಬಿಸುವುದುರ ಮೂಲಕ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಹಬ್ಬುತ್ತಿದ್ದಾರೆ. ಅವರ ಎಲ್ಲ ಸುಳ್ಳು ಆರೋಪಗಳು ಇಂದು ಎಲ್ಲರ ಮುಂದೆ ಅನಾವರಣಗೊಳ್ಳುತ್ತಿವೆ ಎಂದರು.ಮುಖ್ಯ ಅತಿಥಿ ಭರತೇಶ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಮಾತನಾಡಿ, ಧರ್ಮಸ್ಥಳ ಹೇಗೆ ಲಕ್ಷಾಂತರ ಕುಟುಂಬಗಳಿಗೆ ದೀಪವಾಗಿದೆ ಅನ್ನುವ ವಿವರಗಳನ್ನು ಹಾಗೂ ಧರ್ಮಸ್ಥಳದ ಜೊತೆ 5 ದಶಕಗಳ ತಮ್ಮ ಅವಿನಾಭಾವ ಸಂಬಂಧದ ವಿವರ ಹಂಚಿಕೊಂಡರು.
ಕಾರ್ಯಕ್ರಮವನ್ನು ಡಾ.ಶರಯೂ ಪೋತನಿಸ್ ನಿರೂಪಣೆ ಮಾಡಿದರು. ಪ್ರಾಸ್ತಾವಿಕ ನುಡಿಗಳನ್ನು ಪ್ರಬುದ್ಧ ಭಾರತದ ಸಹ ಸಂಯೋಜಕರಾದ ಡಾ.ಶೈಲಜಾ ಹಿರೇಮಠ ಮಂಡಿಸಿದರು. ನ್ಯಾಯವಾದಿ ಮಹೇಶ ಕುಲಕರ್ಣಿ ಗಣ್ಯರ ಪರಿಚಯ ಕೊಟ್ಟರು.ಸಹಸಂಯೋಜಕ ಅಪ್ಪಯ್ಯ ರಾಮರಾವ ವಂದನಾರ್ಪಣೆ ಸಲ್ಲಿಸಿ, ಧರ್ಮಸ್ಥಳ ಶೈವ, ವೈಷ್ಣವಹಾಗೂಜೈನ 3 ಸಂಪ್ರದಾಯಗಳ ಸಮ್ಮಿಲನ ಹಾಗೂ ಸಾಮರಸ್ಯ, ಸದ್ಭಾವದ ಪ್ರತೀಕ ಎಂದರು.
ವಾಗ್ಮಿ ರೋಹಿತ್ ಚಕ್ರತೀರ್ಥ ಬರೆದ ಶಾಡೋ ಗೇಮ್ಸ್ ಪುಸ್ತಕ ಬಿಡುಗಡೆ ಮಾಡಲಾಯಿತು. ರಿಯಾಯತಿ ದರದಲ್ಲಿ ಅನ್ಯಾನ್ಯ ರಾಷ್ಟ್ರೀಯ ಸಾಹಿತ್ಯದ ಮಾರಾಟ ವ್ಯವಸ್ಥೆ ಸಹಆಯೋಜಕರ ವತಿಯಿಂದ ನಡೆದಿದ್ದು ವಿಶೇಷ.