ವ್ಯಸನ ಮುಕ್ತ ಸಮಾಜಕ್ಕೆ ಶ್ರೀಕ್ಷೇತ್ರ ಕಾರ್ಯ ಶ್ಲಾಘನೀಯ: ಕೋಕಿಲ ಅರುಣ್

| Published : Jul 24 2025, 01:00 AM IST

ಸಾರಾಂಶ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಸಹ ದುಶ್ಚಟಗಳಿಂದ ಕುಟುಂಬದವರು ಗೌರವ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿತಕ್ಕೆ ದಾಸರಾಗಿರುವ ವ್ಯಕ್ತಿಗಳು ಸಮಾಜ ಮತ್ತು ಕುಟುಂಬದ ನೆಮ್ಮದಿ ನಾಶ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬೀಳಲಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ಯ ಶ್ಲಾಘನೀಯ ಎಂದು ಪುರಸಭಾಧ್ಯಕ್ಷೆ ಕೋಕಿಲ ಅರುಣ್ ಹೇಳಿದರು.

ಪಟ್ಟಣದ ಜಯಲಕ್ಷ್ಮಿ ನಂಜಪ್ಪ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ನಡೆದ 1956 ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಸಹ ದುಶ್ಚಟಗಳಿಂದ ಕುಟುಂಬದವರು ಗೌರವ ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿತಕ್ಕೆ ದಾಸರಾಗಿರುವ ವ್ಯಕ್ತಿಗಳು ಸಮಾಜ ಮತ್ತು ಕುಟುಂಬದ ನೆಮ್ಮದಿ ನಾಶ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಆರ್ಥಿಕ ಪರಿಸ್ಥಿತಿಯ ಮೇಲೆ ಹೊಡೆತ ಬೀಳಲಿದೆ ಎಂದು ಎಚ್ಚರಿಸಿದರು.

ಸಮಾಜದ ಪ್ರತಿಯೊಬ್ಬರು ಪಾನಮುಕ್ತರಾಗಿ ಸಮಾಜದಲ್ಲಿ ಗೌರವಯುತ ಬದುಕನ್ನು ಕಟ್ಟಿಕೊಳ್ಳಲು ಚಿಂತನೆ ನಡೆಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಟ್ರಸ್ಟ್ ಜಿಲ್ಲಾ ನಿರ್ದೇಶಕಿ ಎಂ.ಚೇತನ, ಉದ್ಯಮಿಗಳಾದ ಬಿ.ವಿ. ಮಂಜುನಾಥ್, ರಾಣಿ ಐಶ್ವರ್ಯ ಡೆವಲಪರ್ಸ್ ನ ಎಚ್.ಎಲ್.ಸತೀಶ್, ನೈದಿಲೆ ಚಂದ್ರು, ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಜಿ. ಶ್ರೀಕಂಠಯ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ.ಪಿ.ಲಿಂಗೇಗೌಡ, ಗುರುಸ್ವಾಮಿ, ನ.ಲಿ.ಕೃಷ್ಣ , ಟ್ರಸ್ಟ್ ನ ಯೋಜನಾಧಿಕಾರಿ ಎಂ.ಎ.ಹಾಲಪ್ಪ, ಮೇಲ್ವಿಚಾರಕ ಎಂ.ಮಂಜುನಾಥ, ಲತಾ, ನಂಜಪ್ಪ ಸೇರಿದಂತೆ ಧರ್ಮಸ್ಥಳ ಸಂಸ್ಥೆ ವಿವಿಧ ಭಾಗಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.