ಸಾರಾಂಶ
ಅಲ್ಲಲ್ಲಿ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಲೇವಡಿ.
ಕನ್ನಡಪ್ರಭ ವಾರ್ತೆ, ಶೃಂಗೇರಿತಾಲೂಕಿನಲ್ಲಿ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಮತ್ತು ಜಾಗ ಮಂಜೂರಾತಿಗೆ ಒತ್ತಾಯಿಸಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಹಾಗೂ ಶೃಂಗೇರಿ ಜನ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು 2007ರ ಬಜೆಟ್ ನಲ್ಲಿ ಮಂಜೂರಾತಿ ದೊರೆತು ₹27 ಕೋಟಿ ಮಂಜೂರಾಗಿತ್ತು. ಆದರೆ ಕಳೆದ 3 ಬಜೆಟ್ ನಲ್ಲಿ ಪ್ರಸ್ತಾವನೆಯಾಗಿದ್ದ ಆಸ್ಪತ್ರೆ ವಿಚಾರ ಈ ಬಾರಿ ಬಜೆಟ್ ನಲ್ಲಿ ಇರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬ್ಯಾನರ್ ಮೂಲಕ ಆಕ್ರೋಶ ಹೊರಕಾಕಿದ್ದಾರೆ.
ಕಳೆದೆರೆಡು ದಿನಗಳಿಂದ ಶೃಂಗೇರಿ ವಿವಿಧೆಡೆ ನೂರು ಬೆಡ್ ಆಸ್ಪತ್ರೆ ಹೋರಾಟಕ್ಕೆ ಸಂಬಂಧಿಸಿದಂತೆ ಅಲ್ಲಲ್ಲಿ ವಿನೂತನ ರೀತಿ ಬ್ಯಾನರ್ ಗಳು ಮತ್ತೆ ರಾರಾಜಿಸುತ್ತಿವೆ. ಬಜೆಟ್ ನಲ್ಲಿ ಶೃಂಗೇರಿಯ ನೂರು ಬೆಡ್ ಆಸ್ಪತ್ರೆ ಕಾಣೆಯಾಗಿದೆ. ಆಸ್ಪತ್ರೆ ಹುಡುಕಿ ಕೊಟ್ಟವರಿಗೆ ಸರ್ಕಾರದಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ಬ್ಯಾನರ್ ಒಂದರಲ್ಲಿ ಬರಹವಿದ್ದರೆ, ಶೃಂಗೇರಿ ಆಸ್ಪತ್ರೆಗೆ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರು ಬೇಕಾಗಿದ್ದಾರೆ. ಕರ್ತವ್ಯ ನಿರ್ವಹಿಸಲು ಬರಲು ಒಪ್ಪಿಕೊಂಡರೆ ಮಾತ್ರ ನೇಮಿಸುತ್ತಾರಂತೆ ಎಂಬ ಬರಹದ ಮೂಲಕ ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ಶೃಂಗೇರಿಯಲ್ಲಿ ಅಲ್ಲಲ್ಲಿ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಲೇವಡಿ ಮಾಡಲಾಗಿತ್ತು.2007 ರಲ್ಲಿ ನೂರು ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಆದೇಶವಾಗಿ 3 ಬಜೆಟ್ ನಲ್ಲಿಯೂ ಪೂರ್ಣ ಆಗಿದ್ದು ₹27 ಕೋಟಿ ಅನುದಾನ ಮೀಸಲಾಗಿಡಲಾಗಿತ್ತು. ಆದರೆ ಶೃಂಗೇರಿ ತಾಲೂಕಿನಲ್ಲಿ ಎಲ್ಲಿಯೂ ಜಾಗ ಸಿಕ್ಕಿರಲಿಲ್ಲ. ಶೃಂಗೇರಿ, ನೆಮ್ಮಾರು, ಶಿಡ್ಲೆ ಹೀಗೆ ಗುರುತಿಸಿದ ಜಾಗವೆಲ್ಲಾ ಅರಣ್ಯ ಇಲಾಖೆ, ಸೆಕ್ಷನ್ 4(1),17, ಮೀಸಲು ಅರಣ್ಯಗಳಾಗಿ ಕಂಡು ಬಂದಿದ್ದವು. ಇದಕ್ಕೆ ಸೂಕ್ತ ಜಾಗ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆ ಅಡ್ಡಿಯ ಕುಂಟು ನೆಪದಿಂದ ಶೃಂಗೇರಿ ಜನತೆಗೆ ನೂರು ಬೆಡ್ ಆಸ್ಪತ್ರೆ ನಿರ್ಮಾಣ ಕನಸಾ ಗಿಯೇ ಉಳಿಯುತ್ತಾ ಬಂದಿತು. ಹಾಗಾಗಿ ನೂರುಬೆಡ್ ಆಸ್ಪತ್ರೆ ಹೋರಾಟ ಸಮಿತಿ, ಶೃಂಗೇರಿ ಜನತೆ ಹೋರಾಟ ಮುಂದುವರಿಸುತ್ತಾ ಬಂದಿದ್ದರು.
ಪ್ರತೀ ಬಜೆಟ್ ನಲ್ಲಿ ಶೃಂಗೇರಿ ನೂರು ಬೆಡ್ ಆಸ್ಪತ್ರೆ ವಿಚಾರ ಪ್ರಸ್ತಾಪನೆಗೊಳ್ಳುತ್ತಿತ್ತು. ಆದರೆ ಈ ಬಾರಿ ಬಜೆಟ್ ನಲ್ಲಿ ಎಲ್ಲಿಯೂ ಈ ಪ್ರಸ್ತಾವನೆ ಕಾಣದೇ ಮರೆಯಾಗಿದ್ದರಿಂದ ಶೃಂಗೇರಿ ಜನರಲ್ಲಿ ಆಕ್ರೋಶದ ಕಿಡಿ ಹೊತ್ತಿದೆ. ಇದರ ಪರಿಣಾಮವೇ ಮತ್ತೆ ಅಲ್ಲಲ್ಲಿ ಸರ್ಕಾರದ ವಿರುದ್ಧ ಬ್ಯಾನರ್ ಗಳು ರಾರಾಜಿಸಿತು. ಇನ್ನು ಕೆಲ ಬ್ಯಾನರ್ ಗಳಲ್ಲಿ ಪ್ರವಾಸಿಗರೇ ಎಚ್ಚರ. ಭರವಸೆ ಶೂರರ ಆಸ್ಪತ್ರೆ ಇನ್ನೂ ಆಗಿಲ್ಲ. ಶೃಂಗೇರಿಗೆ ಬರುವ ಪ್ರವಾಸಿಗರೇ ನಿಧಾನವಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಶೃಂಗೇರಿಯಲ್ಲಿ ಭರವಸೆ ಶೂರರ ಆಸ್ಪತ್ರೆ ಸುಸಜ್ಜಿತ ಆಸ್ಪತ್ರೆ ಇನ್ನೂ ಆಗಿಲ್ಲ.ಮೂಳೆ ಮುರಿದರೆ ಡಾಕ್ಟರ್ ಇಲ್ಲ. ಮಕ್ಕಳ ಡಾಕ್ಟರ್ ಇಲ್ಲ. ಡೆಲಿವರಿ ಡಾಕ್ಟರ್ ಕಾಣ್ತಾನೆ ಇಲ್ಲ. ಜನಪ್ರತಿನಿಧಿಗಳು ತಲೆ ಕೆಡಿಸಿ ಕೊಂಡಿಲ್ಲ. ನಿತ್ಯ ಬದುಕು ನಿಮ್ಮ ಕೈಯಲ್ಲಿ ಎಂಬ ತಲೆ ಬರಹ ಹೊಂದಿವೆ. ಹೀಗೆ ಅಲ್ಲಲ್ಲಿ ಶೃಂಗೇರಿ ಜನರ ಆಕ್ರೋಶ ಹೊರ ಹೊಮ್ಮಿತ್ತು.
ರಾತ್ರೋ ರಾತ್ರಿ ಬ್ಯಾನರ್ ತೆರವಿಗೆ ಆಕ್ರೋಶ:ನೂರು ಬೆಡ್ ಆಸ್ಪತ್ರೆ ಜಾಗ ಮಂಜೂರಾತಿಗೆ ಒತ್ತಾಯಿಸಿ ಪ್ರಸೂತಿ, ಮಕ್ಕಳ, ಮೂಳೆ ತಜ್ಞರ ನೇಮಕಕ್ಕೆ ಒತ್ತಾಯಿಸಿ ಬ್ಯಾನರ್ ಹಾಕಿ ಬ್ಯಾನರ್ ಅಭಿಯಾನ ನಡೆಸಿರುವ ಬ್ಯಾನರ್ ಗಳನ್ನು ರಾತ್ರೋ ರಾತ್ರಿ ಪೊಲೀಸರು ತೆರವುಗೊಳಿಸಿರುವುದಕ್ಕೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ವಿಳಂಬ ನೀತಿಗೆ ಕಡಿವಾಣ ಹಾಕಿ ತುರ್ತಾಗಿ ಜಾಗ ಮಂಜೂರು ಮಾಡಿ ಆಸ್ಪತ್ರೆ ನಿರ್ಮಾಣ ಮಾಡಿ ಎಂದು ಒತ್ತಾಯಿಸಿ ಈ ಹಿಂದೆ ಜನಪ್ರತಿನಿದಿಗಳಿಗೆ ಗಡುವು ನೀಡಲಾಗಿತ್ತು. ಆದರೆ ಈವರೆಗೂ ಸ್ಪಂದಿಸಿಲ್ಲ. ಕಾರಣ ಮತ್ತೆ ಬ್ಯಾನರ್ ಅಭಿಯಾನ ಆರಂಬಿಸಲಾಗಿತ್ತು. ಸರ್ಕಾರ ತಕ್ಷಣವೇ ಸ್ಪಂದಿಸಿ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಅಭಿಯಾನ ಮುಂದುವರಿಯಲಿದೆ ಎಂದು ಎಚ್ಚಿರಿಸಿದ್ದಾರೆ.14 ಶ್ರೀ ಚಿತ್ರ 2-ಬಜೆಟ್ ನಲ್ಲಿ ಶೃಂಗೇರಿಯ ನೂರು ಬೆಡ್ ಆಸ್ಪತ್ರೆ ಕಾಣೆ-ಹುಡುಕಿ ಕೊಟ್ಟವರಿಗೆ ಸರ್ಕಾರದಿಂದ ಸೂಕ್ತ ಬಹುಮಾನ ಎಂಬ ಬರಹವುಳ್ಳ ಬ್ಯಾನರ್.
14 ಶ್ರೀ ಚಿತ್ರ 2-ಬೇಕಾಗಿದ್ದಾರೆ.ಶೃಂಗೇರಿ ತಾಲೂಕು ಆಸ್ಪತ್ರೆಗೆ ಪ್ರಸೂತಿ ,ಮಕ್ಕಳ,ಮೂಳೆ ತಜ್ಞರು.ಕಾರ್ಯನಿರ್ವಹಿಸಲು ಇಚ್ಚಿಸುವವರು ಡಿಹೆಚ್ಒ ಅಥಾವ ಸರ್ಕಾರವನ್ನು ಸಂಪರ್ಕಿಸಿ ಎಂಬ ಬರಹವುಳ್ಳ ಬ್ಯಾನರ್.