. ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತ ಹಸ್ತದಿಂದ ಈ ಪುಣ್ಯ ಕಾರ್ಯಕ್ಕೆ ಚಾಲನೆ ದೊರೆಯಿತು.
ಕನ್ನಡಪ್ರಭ ವಾರ್ತೆ ಕಾರವಾರ
ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಶೇಜವಾಡದ ಮಹತೋಭಾರ ಶ್ರೀ ಶೆಜ್ಜೇಶ್ವರ ನೂತನ ಶಿಲಾಮಯ ದೇವಾಲಯದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವು ಸೋಮವಾರ ಅತ್ಯಂತ ವೈಭವದಿಂದ ನೆರವೇರಿತು. ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತ ಹಸ್ತದಿಂದ ಈ ಪುಣ್ಯ ಕಾರ್ಯಕ್ಕೆ ಚಾಲನೆ ದೊರೆಯಿತು.ಗೋಕರ್ಣದ ಪ್ರಸಿದ್ಧ ತಂತ್ರಿಗಳಾದ ಗಜಾನನ ಭಟ್ಟ ಹಿರೇ ಮತ್ತು ಗಣಪತಿ ಭಟ್ಟ ಹಿರೇ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಿದವು. ಗಣಪತಿ ಹೋಮ, ಬ್ರಹ್ಮ ಕೂರ್ಚ ಹೋಮ ಹಾಗೂ ಶ್ರೀ ದೇವರಿಗೆ ಭಕ್ತಿಯಿಂದ ರುದ್ರಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 11.50ರ ಶುಭ ಮುಹೂರ್ತದಲ್ಲಿ ಜಗದ್ಗುರುಗಳು ಶಿಲಾನ್ಯಾಸ ನೆರವೇರಿಸುವ ಮೂಲಕ ನೂತನ ದೇವಾಲಯದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು.ಶಿಲಾನ್ಯಾಸದ ನಂತರ ಆಶೀರ್ವಚನ ನೀಡಿದ ಶ್ರೀ ವಿಧುಶೇಖರ ಭಾರತೀ ಶ್ರೀಗಳು, ವಿಶ್ವದ ಅಗಾಧತೆ ಮತ್ತು ಭಗವಂತನ ಶಕ್ತಿಯ ಕುರಿತು ಮಾತನಾಡಿದರು. ಈ ವಿಶ್ವವು ಎಷ್ಟು ವಿಸ್ತಾರವಾಗಿದೆ ಎಂದರೆ ಮಾನವನ ಬುದ್ಧಿಗೆ ಅದನ್ನು ಗ್ರಹಿಸಲು ಸಾಧ್ಯವಿಲ್ಲ. ವಿಜ್ಞಾನದ ವೇಗಕ್ಕಿಂತಲೂ ಮೀರಿದ ಶಕ್ತಿ ಪರಮಾತ್ಮನದು. ವೇದ-ಉಪನಿಷತ್ತುಗಳು ಸಾರಿದಂತೆ, ನಮಗೆ ಕಾಣುವ ಈ ಬೃಹತ್ ಜಗತ್ತು ಪರಮಾತ್ಮನ ಒಂದು ಸಣ್ಣ ಅಂಶವಷ್ಟೇ ಎಂದು ಅವರು ವಿವರಿಸಿದರು.ಸನಾತನ ಧರ್ಮದ ಮುಖ್ಯ ಸಾರಾಂಶಗಳಾದ ಭಗವದ ಆರಾಧನೆ ಮತ್ತು ಪರೋಪಕಾರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಜ್ಜನರಾಗಿ ಬಾಳುತ್ತಾ ಇತರರಿಗೆ ಒಳಿತನ್ನು ಮಾಡಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಕರೆ ನೀಡಿದರು.ಹಳೆಯ ಪುರಾತನ ಕ್ಷೇತ್ರಗಳ ಪವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕೇವಲ ಹೊಸ ದೇವಸ್ಥಾನ ಕಟ್ಟುವುದಷ್ಟೇ ಅಲ್ಲದೆ, ಪ್ರಾಚೀನ ದೇವಸ್ಥಾನಗಳಲ್ಲಿ ಶಾಸ್ತ್ರೋಕ್ತ ಪೂಜೆ ಮತ್ತು ಸಂಪ್ರದಾಯಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಭಕ್ತರಿಗೆ ಆಶೀರ್ವಚನ ನೀಡಿದರು.ಶಾಸಕ ಸತೀಶ ಸೈಲ್, ಈ ದೇವಾಲಯದ ಅಭಿವೃದ್ಧಿಗೆ ಈಗಾಗಲೇ ಶಾಸಕರ ನಿಧಿಯಿಂದ ₹16 ಕೋಟಿ ಮಂಜೂರು ಮಾಡಲಾಗಿದೆ. ಹೆಚ್ಚುವರಿಯಾಗಿ ₹5 ಕೋಟಿ ಅನುದಾನ ಪಡೆಯಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ದೇವಾಲಯ ಜೀರ್ಣೋದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.