ಬ್ರಾಹ್ಮಣ ಸಮುದಾಯ ವೈದಿಕ ಅಧ್ಯಯನವನ್ನು ನಿರ್ಲಕ್ಷಿಸಬಾರದು. ಮಕ್ಕಳಿಗೂ ವೈದಿಕ ಆಧ್ಯಯನದ ಮಹತ್ವದ ಬಗ್ಗೆ ತಿಳಿಹೇಳಬೇಕು. ಹಿಂದೆ ಲೋಪ ಆಗಿದ್ದರೆ ಅದನ್ನು ಸರಿಪಡಿಸಲು ಇನ್ನೂ ಅವಕಾಶ ಇದೆ. ವೈದಿಕ ವಿದ್ಯೆಯನ್ನು ಅಧ್ಯಯನ ಮಾಡಿದರೆ ಉಳಿದೆಲ್ಲ ವಿದ್ಯೆಯನ್ನು ಸುಲಲಿತವಾಗಿ ಕಲಿಯಲು ಸಾಧ್ಯ.

ಮಂಗಳೂರು: ಬ್ರಾಹ್ಮಣ ಸಮುದಾಯ ವೈದಿಕ ಅಧ್ಯಯನವನ್ನು ನಿರ್ಲಕ್ಷಿಸಬಾರದು. ಮಕ್ಕಳಿಗೂ ವೈದಿಕ ಆಧ್ಯಯನದ ಮಹತ್ವದ ಬಗ್ಗೆ ತಿಳಿಹೇಳಬೇಕು. ಹಿಂದೆ ಲೋಪ ಆಗಿದ್ದರೆ ಅದನ್ನು ಸರಿಪಡಿಸಲು ಇನ್ನೂ ಅವಕಾಶ ಇದೆ. ವೈದಿಕ ವಿದ್ಯೆಯನ್ನು ಅಧ್ಯಯನ ಮಾಡಿದರೆ ಉಳಿದೆಲ್ಲ ವಿದ್ಯೆಯನ್ನು ಸುಲಲಿತವಾಗಿ ಕಲಿಯಲು ಸಾಧ್ಯ. ವೈದಿಕ ವಿದ್ಯೆಯ ಅಧ್ಯಯನದಿಂದ ಶ್ರೇಯಸ್ಸು ಸಾಧ್ಯ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಹೇಳಿದರು.

ಮಂಗಳೂರು ಕರಾಡ ಬ್ರಾಹ್ಮಣ ಸಮಾಜದ ರಜತ ಮಹೋತ್ಸವದ ಅಂಗವಾಗಿ ನಗರದ ಬಾಳಂ ಭಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ಷರ ಲಕ್ಷ ಗಾಯತ್ರಿ ಮಹಾಯಾಗದ ಪೂರ್ಣಾಹುತಿ ಮಾಡಿ ಬಳಿಕ ಆಶೀರ್ವಚನ ನೀಡಿದರು.ಸನಾತನ ಧರ್ಮ ಉಳಿವಿಗಾಗಿ ಬ್ರಾಹ್ಮಣ ಸಮಾಜ ಮಾಡಿದ ತ್ಯಾಗ ಅತ್ಯಂತ ದೊಡ್ಡದು. ಈ ಹೋರಾಟದ ಹಾದಿಯಲ್ಲಿ ಸಮುದಾಯ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆದರೂ ಅದನ್ನು ಲೆಕ್ಕಿಸದೆ ಧರ್ಮದ ಏಳಿಗೆಗಾಗಿ ಸಮಾಜದ ಮಹನೀಯರು ಶ್ರಮಿಸಿದರು. ಧರ್ಮ ಸಂರಕ್ಷಣೆಯಲ್ಲಿ ಎಲ್ಲ ಬ್ರಾಹ್ಮಣ ಸಮುದಾಯದ ಪಾಲು ಸಮಾನ ಇದೆ ಎಂದು ಅವರು ಹೇಳಿದರು.ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಹಿಂದೂ ದರ್ಮ ಅತ್ಯಂತ ಶಕ್ತಿಶಾಲಿಯಾದ ಧರ್ಮ. ಇದಕ್ಕೆ ಕಾರಣ ಇಲ್ಲಿನ ವೈದಿಕ ಪರಂಪರೆ. ಆದರೆ ಇದನ್ನು ಬ್ರಿಟಿಷ್ ಆಡಳಿತ ಒಡೆಯುವ ಪ್ರಯತ್ನ ಮಾಡಿತ್ತು. ಇಂದಿಗೂ ಅಂತಹಾ ಪ್ರಯತ್ನ ಆಗಾಗ ನಡೆಯುತ್ತಿದೆ. ಅದಕ್ಕಾಗಿ ವೈದಿಕ ಪರಂಪರೆಯ ಎಲ್ಲರೂ ಒಟ್ಟಾಗಿರಬೇಕು. ಇದಕ್ಕೆ ಇಂತಹಾ ಜಪಯಜ್ಞಗಳು ಸಹಕಾರಿ ಎಂದರು.ಕರ್ಣಾಟಕ ಬ್ಯಾಂಕ್ ಅಡಳಿತ ನಿರ್ದೇಶಕ ರಾಘವೇಂದ್ರ ಭಟ್ ಮಾತನಾಡಿ, ಜಗದ್ಗುರುಗಳ ಸಂದೇಶಗಳನ್ನು ನಾವೆಲ್ಲರೂ ಪಾಲಿಸಬೇಕು. ಯಾಗದಿಂದ ಎಲ್ಲರ ಬಾಳಿನಲ್ಲಿ ಸುಖ, ನೆಮ್ಮದಿ, ಶ್ರೇಯಸ್ಸು ಲಭಿಸಲಿ. ಕರ್ಣಾಟಕ ಬ್ಯಾಂಕ್ ನ ಏಳಿಗೆಗಾಗಿ ಶೃಂಗೇರಿ ಮಠದ ಆಶೀರ್ವಾದ ಸದಾ ಇದೆ ಎಂದು ನೆನಪಿಸಿದರು.ಈ ಸಂದರ್ಭ ಖಂಡೇರಿ ಅನಂತ ಶಾಸ್ತ್ರಿ ಬರೆದ 120 ಶ್ಲೋಕಗಳನ್ನು ಒಳಗೊಂಡ ‘ಅಗಲ್ಪಾಡಿ ಮಹಾತ್ಮೆ’ ಇದರ ಕನ್ನಡ ಅನುವಾದ ಪುಸ್ತಕವನ್ನು ಜಗದ್ಗುರುಗಳು ಲೊಕಾಪರ್ಪಣೆಗೊಳಿಸಿದರು. ಕೃಷ್ಣರಾಜ್ ಭಟ್ ಪುಸ್ತಕದ ಪರಿಚಯಿಸಿದರು. ಸಂಹಿತೆ ವೇದಾಧ್ಯಯನ ಮಾಡಿದ ವಿದ್ವಾಂಸರನ್ನು ಜಗದ್ಗುರುಗಳು ಆಶೀರ್ವದಿಸಿದರು.

ಶರವು ದೇವಸ್ಥಾನದ ಶಿಲೆ ಶಿಲೆ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಮಂಗಳೂರು ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಿವಶಂಕರ ಭಟ್ ಕನ್ನಡ್ಕ, ಕರಾಡ ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಗಿರಿಧರ ಭಟ್ ಪರಾಡ್ಕರ್, ಡಾ.ಸತ್ಯಕೃಷ್ಣ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಕರಾಡ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಎಸ್.ವಿ.ಭಟ್, ಮಂಗಳೂರು ಕರಾಡ ಸಮಾಜದ ಮಾಜಿ ಅಧ್ಯಕ್ಷರಾದ ಕೋಳಿಕ್ಕಜೆ ಬಾಲಕೃಷ್ಣ ಭಟ್, ಎಸ್.ವಿ.ಭಟ್, ಮಠದಮೂಲೆ ಪುರುಷೋತ್ತಮ ಭಟ್, ಅನಂತಶಯನ ಭಟ್ ಮತ್ತಿತರರಿದ್ದರು.

ವೇದ ಮೂರ್ತಿ ವಿದ್ಯಾಶಂಕರ್ ಅಂಬೇಕರ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ಗಾಯತ್ರಿ ಮಹಾಯಾಗ ನಡೆಯಿತು. ಮಧ್ಯಾಹ್ನ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಯಾಗದ ಪೂರ್ಣಾಹುತಿ ನಡೆಯಿತು.