ಶೃಂಗೇರಿ: ಗಾಳಿ ಸಹಿತ ವರುಣನ ಆರ್ಭಟ; ಜನಜೀವನ ಅಸ್ತವ್ಯಸ್ತ

| Published : Jul 26 2024, 01:38 AM IST

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು ಗುರುವಾರ ಬೆಳಗಿನ ಜಾವ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಗಾಳಿ, ಗುಡುಗು ಸಿಡಿಲು ಸಹಿತ ಭಾರೀ ಮಳೆ ಅಬ್ಬರಿಸಿತು. ಬುಧವಾರವೂ ಮಳೆಯ ಆರ್ಭಟ ಸಂಜೆ ವರೆಗೂ ಮುಂದುವರಿದು ರಾತ್ರಿಯಿಡೀ ಎಡಬಿಡದೆ ಸುರಿಯಿತು. ಪಶ್ಚಿಮ ಘಟ್ಟಗಳ ತಪ್ಪಲು ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಯಾಗುತ್ತಿರುವುದರಿಂದ ತುಂಗಾ ನದಿಯ ನೀರಿನ ಪ್ರಮಾಣ ಹೆಚ್ಚಿ ಅಪಾಯದ ಮಟ್ಟ ಮೀರಿ ನದಿ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಕಲ್ಲಿಸುವ ಬೈಪಾಸ್‌ ರಸ್ತೆ ಮೇಲೆ ಹರಿದಿದ್ದರಿಂದ ಸಂಪರ್ಕ ಕಡಿತಗೊಂಡಿತು.

ಮತ್ತೆ ತುಂಬಿಹರಿದ ತುಂಗೆ । ಕುರುಬಗೇರಿ-ಕೆವಿಆರ್‌ ವೃತ್ತ ಬೈಪಾಸ್‌ ರಸ್ತೆಯ ಮೇಲೆ ಪ್ರವಾಹ: ಸಂಪರ್ಕ ಕಡಿತ,

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು ಗುರುವಾರ ಬೆಳಗಿನ ಜಾವ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಗಾಳಿ, ಗುಡುಗು ಸಿಡಿಲು ಸಹಿತ ಭಾರೀ ಮಳೆ ಅಬ್ಬರಿಸಿತು. ಬುಧವಾರವೂ ಮಳೆಯ ಆರ್ಭಟ ಸಂಜೆ ವರೆಗೂ ಮುಂದುವರಿದು ರಾತ್ರಿಯಿಡೀ ಎಡಬಿಡದೆ ಸುರಿಯಿತು. ಪಶ್ಚಿಮ ಘಟ್ಟಗಳ ತಪ್ಪಲು ಕೆರೆಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಯಾಗುತ್ತಿರುವುದರಿಂದ ತುಂಗಾ ನದಿಯ ನೀರಿನ ಪ್ರಮಾಣ ಹೆಚ್ಚಿ ಅಪಾಯದ ಮಟ್ಟ ಮೀರಿ ನದಿ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಕಲ್ಲಿಸುವ ಬೈಪಾಸ್‌ ರಸ್ತೆ ಮೇಲೆ ಹರಿದಿದ್ದರಿಂದ ಸಂಪರ್ಕ ಕಡಿತಗೊಂಡಿತು.

ಶ್ರೀಮಠದ ತುಂಗಾನದಿ ತೀರದ ಕಪ್ಪೆಶಂಕರ ದೇವಾಲಯ, ಸಂದ್ಯಾವಂದನ ಮಂಟಪ ಮತ್ತೆ ನೀರಿನಿಂದ ಆವರಿಸಿದ್ದರು, ತಂಗ್ಗು ಪ್ರದೇಶ಼ಗಳು, ಹೊಲಗೆದ್ದೆಗಳು,ಅಡಕೆ ತೋಟಗಳು ಮತ್ತೆ ಮುಳುಗಡೆಯಾದವು. ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗುಸೇತುವೆ ಅರ್ಧ ಮುಳುಗಿ ರಸ್ತೆ ಸಂಪರ್ಕ ಸ್ಥಗಿತವಾಯಿತು. ಪ್ರವಾಹಪೀಡಿತ ಕುರುಬಗೇರಿ, ಗಾಂಧಿ ಮೈದಾನ ಸಮೀಪವೇ ನದಿ ನೀರು ಹರಿಯುತ್ತಿದ್ದು ಯಾವುದೇ ಕ್ಷಣದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕಳೆದ 4-5 ದಿನಗಳಿಂದ ಭಾರೀ ಗಾಳಿ ಆರ್ಭಕ್ಕೆ ಮರಗಳು ಧರೆಗುರುಳುತ್ತಿವೆ. ಕೆಲವೆಡೆ ಮನೆ ಛಾವಣಿಗಳು, ಶೀಟ್‌ ಗಳು ಹಾರಿಹೋಗಿವೆ. ತೋಟಗಳಲ್ಲಿ ಅಡಕೆ, ಬಾಳೆ ಮರಗಳು ತುಂಡಾಗಿದ್ದು ಅದರಲ್ಲೂ ಅಡಕೆ,ಬಾಳೆ ತೋಟಗಳಿಗೆ ವ್ಯಾಪಕ ಹಾನಿಯಾಗುತ್ತಿದೆ. ಗುಡ್ಡಕುಸಿತ, ಭೂಕುಸಿತ, ರಸ್ತೆ ಕುಸಿತವೂ ನಿಲ್ಲುತ್ತಿಲ್ಲ. ಮರಗಳು ಉರುಳಿ ರಸ್ತೆ, ವಿದ್ಯುತ್‌ ಲೈನ್‌ ಗಳ ಮೇಲೆ ಬೀಳುತ್ತಿದ್ದು ವಿದ್ಯುತ್‌ ಕಂಬಗಳು, ಲೈನ್‌ಗಳು ತುಂಡಾಗಿ ಬೀಳುತ್ತಿವೆ. ಇದರಿಂದ ವಿದ್ಯುತ್‌ ವ್ಯತ್ಯಯ ಹಾಗೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ತಾಲೂಕಿನಲ್ಲಿ 5 ದಿನಗಳಿಂದ ವಿದ್ಯುತ್‌ ಸಂಪರ್ಕ ಕಡಿತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ನೆಮ್ಮಾರು, ಬೇಗಾರು, ಕಿಗ್ಗಾ, ಮೆಣಸೆ, ಧರೆಕೊಪ್ಪ, ಅಡ್ಡಗದ್ದೆ, ಕೂತಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್‌ ಇಲ್ಲದೇ ಮೊಬೈಲ್ ಸೇವೆ, ಕುಡಿವ ನೀರಿನ ಅವ್ಯವಸ್ಥೆ ಎದುರಾಗಿದೆ. ಒಂದೆಡೆ ಗಾಳಿ ಮಳೆ ಆರ್ಭಟ, ಇನ್ನೊಂದೆಡೆ ವಿದ್ಯುತ್, ಮೊಬೈಲ್, ಕುಡಿವ ನೀರಿಲ್ಲದೇ ಜನ ತತ್ತರಿಸಿದ್ದಾರೆ. ತಾಲೂಕು ಸಂಪೂರ್ಣ ಮಳೆನಾಡಾಗಿದೆ.

ಗುರುವಾರ ಬೆಳಿಗ್ಗೆ ಜೋರಾದ ಗಾಳಿ, ಗುಡುಗು ಸಿಡಿಲಿನ ಆರ್ಭಟ ಸಹಿತ ಭಾರೀ ಮಳೆಯಾದ ಪರಿಣಾಮ ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಡಶಾಲೆಗಳಿಗೆ ರಜೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆಯಿಂದ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್‌ ರಸ್ತೆ ಮೇಲೆ ತುಂಗೆ ನೀರು ಹರಿಯುತ್ತಿದ್ದರಿಂದ ಬ್ಯಾರಿಕೇಡ್‌ ಅಳವಡಿಸಿದ್ದು, ಈ ರಸ್ತೆ ಸೇರಿದಂತೆ ಗಾಂಧಿ ಮೈದಾನಕ್ಕೂ ಪ್ರವೇಶ ನಿಷೇಧಿಸಲಾಗಿತ್ತು.

26 ಶ್ರೀ ಚಿತ್ರ 1-

ಶೃಂಗೇರಿ ಸುತ್ತಮುತ್ತ ಭಾರೀ ಗಾಳಿ ಮಳೆಯಾಗುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿರುವ ತುಂಗಾ ನದಿ.

26 ಶ್ರೀ ಚಿತ್ರ 2-

ಶೃಂಗೇರಿ ಪಟ್ಟಣದ ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕ ಬೈಪಾಸ್‌ ರಸ್ತೆಯ ಮೇಲೆ ತುಂಗಾ ನದಿಯ ಪ್ರವಾಹ ಹರಿಯುತ್ತಿರುವುದು.