ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ದಿನವೇ ಬಾಲರಾಮನ ದರ್ಶನ ಭಾಗ್ಯ ತನಗೊದಗಿ ಬಂದಿತ್ತು. ರಾಮನ ಮುಂದೆ ನಿಂತಾಗ ಸಂಪೂರ್ಣ ಮೈಮರೆಯುವಿಕೆಯ ಅನುಭವವಾಯಿತು. ಅಯೋಧ್ಯೆ ಎಲ್ಲ ದೃಷ್ಠಿಯಲ್ಲಿಯೂ ಅತ್ಯದ್ಭುತ ಕ್ಷೇತ್ರವಾಗಿದೆ ಎಂದು ಉಪ್ಪಿನಂಗಡಿಯ ಶ್ರೀನಿಧಿ ಉಪಾಧ್ಯಾಯ ತನ್ನ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.ಉಡುಪಿ ಮಠದ ಶಿಷ್ಯ ಪರಂಪರೆಯನ್ನು ಹೊಂದಿರುವ ಶ್ರೀನಿಧಿ ಉಪಾಧ್ಯಾಯ ಅವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯರ ಮಗ. ಪೇಜಾವರ ಮಠಾಧೀಶರ ಸಹಾಯಕರಾಗಿ ಅಯೋಧ್ಯೆಗೆ ತೆರಳುವ ಅವಕಾಶವನ್ನು ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜ.೧೯ರಂದು ನಾನು ಅಯೋಧ್ಯೆ ತಲುಪಿದ್ದೆ. ೨೨ರಂದು ನಾನು ಸೇರಿದಂತೆ ಪೇಜಾವರ ಮಠಾಧೀಶರ ಶಿಷ್ಯ ವರ್ಗ ಅಯೋಧ್ಯೆಯಲ್ಲಿ ಇದ್ದೇವಾದರೂ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿಯುವ ವರೆಗೆ ನಮಗೆ ರಾಮಮಂದಿರದ ಪ್ರಾಂಗಣ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಸಾಯಂಕಾಲ ಪ್ರವೇಶಿಸಲು ಅವಕಾಶ ದೊರೆಯಿತು. ಮಂದಿರದ ಒಳಗೆ ಕಾಲಿರಿಸಿದ್ದಂತೆ ಮೈ ಮನ ರೋಮಾಂಚನವಾಯಿತು. ಬಾಲರಾಮನ ಮುಂದೆ ನಿಂತಾಗ , ವಿಗ್ರಹದ ತೇಜಸ್ಸು ನಮ್ಮನ್ನು ಮೈ ಮರೆಯುವಂತೆ ಮಾಡಿತ್ತು. ಅಲ್ಲಿ ನನಗಾದ ಅನುಭವವನ್ನು ವರ್ಣಿಸಲಾಗದು ಎನ್ನುತ್ತಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠೆಯ ದಿನವೇ ದರ್ಶನ ಭಾಗ್ಯವನ್ನು ಪಡೆದ ಸೌಭಾಗ್ಯ ನನ್ನದಾಗಿದ್ದು, ನನ್ನ ಜೀವನ ಸಾರ್ಥಕ್ಯವನ್ನು ಕಂಡಂತಾಗಿದೆ ಎನ್ನುತ್ತಾರೆ ಶ್ರೀನಿಧಿ ಉಪಾಧ್ಯಾಯ.