ಎಚ್.ಡಿ. ಕೋಟೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನ

| Published : Aug 16 2024, 12:59 AM IST

ಸಾರಾಂಶ

ತಾಲೂಕಿನಲ್ಲಿ ನಾವುಗಳು 78ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ,

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ 78ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿತು.

ಪಟ್ಟಣದ ಆಡಳಿತ ಸೌಧದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಧ್ವಜಾರೋಹಣ ನೆರವೇರಿಸಿ ತಾಲೂಕಿನ ಸಮಸ್ತ ಜನತೆಗೆ ಶುಭಾಶಯ ಕೋರಿದರು.

ಪಟ್ಟಣದ ಒಂದನೇ ಮುಖ್ಯರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯದ ಮುಂಭಾಗ ಬೆಳ್ಳಿರಥದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಶಾಸಕ ಅನಿಲ್ ಚಿಕ್ಕಮಾದು ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯು ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೊನೆಗೊಂಡಿತು.

ಕಾಲೇಜು ಆವರಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಧ್ವಜಾರೋಹಣ ನೆರವೇರಿಸಿದರು ಮತ್ತು ಪೊಲೀಸರಿಂದ ಗೌರವ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ನಾವುಗಳು 78ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ, ಸ್ವಾತಂತ್ರ್ಯ ಹೋರಾಟಗಾರರನ್ನು ಹಾಗೂ ಬಲಿದಾನ ಮಾಡಿದ ವೀರರನ್ನು ನಾವುಗಳು ಈ ದಿನ ಸ್ಮರಿಸಬೇಕಾಗಿದೆ ಎಂದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ನಾವು ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಮ್ಮ ಪೂರ್ವಕರು ನಡೆಸಿದ ಹೋರಾಟ ಗಡಿ ಭಾಗದಲ್ಲಿ ನಮ್ಮಗಳನ್ನು ರಕ್ಷಿಸುತ್ತಿರುವ ದೇಶಭಕ್ತರನ್ನು ಈ ವೇಳೆಯಲ್ಲಿ ಸ್ಮರಿಸಿಕೊಳ್ಳಬೇಕು ಎಂದರು.

ತಾಪಂ ಅನುದಾನದಲ್ಲಿ ಅಂಗವಿಕಲರಿಗೆ ಸಲಕರಣೆ ವಿತರಿಸಲಾಯಿತು. ಶಾಸಕ ಅನಿಲ್ ಚಿಕ್ಕಮಾದು ಅವರು ತಮ್ಮ ತಂದೆ ದಿವಂಗತ ಚಿಕ್ಕಮಾದು ಅವರ ಸ್ಮರಣಾರ್ಥ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ತೇರ್ಗಡೆ ಹೊಂದಿದ ನಾಲ್ಕು ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ವಿತರಿಸಿದರು.

ತಹಸಿಲ್ದಾರ್ ಶ್ರೀನಿವಾಸ್ ಹಾಗೂ ಸಿಪಿಐ ಶಬೀರ್ ಹುಸೇನ್ ಅವರನ್ನು ಶಾಸಕರು ಸನ್ಮಾನಿಸಿದರು.

ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ, ಪುರಸಭಾ ಸದಸ್ಯರಾದ ನರಸಿಂಹಮೂರ್ತಿ, ಆಸಿಫ್, ನಾಗರಾಜು, ಪುಟ್ಟಬಸವ ನಾಯಕ, ಮಧು, ವೆಂಕಟೇಶ್, ಶಾಂತಮ್ಮ, ಸೋಮಶೇಖರ್, ನಂಜಮ್ಮ, ತಾಪಂ ಮಾಜಿ ಸದಸ್ಯ ಗಿರಿಗೌಡ ಇದ್ದರು.