ಶ್ರೀನಿವಾಸ್‌ಗೆ ಟಿಕೆಟ್ ಡೌಟ್; ವರಿಷ್ಠರ ಮೆಚ್ಚಿಸಲು ಕಸರತ್ತು

| Published : Nov 12 2025, 02:00 AM IST

ಶ್ರೀನಿವಾಸ್‌ಗೆ ಟಿಕೆಟ್ ಡೌಟ್; ವರಿಷ್ಠರ ಮೆಚ್ಚಿಸಲು ಕಸರತ್ತು
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವ ಕುರಿತು ಅನುಮಾನ ಎದುರಿಸುತ್ತಿರುವ ನಂದಿಗಾವಿ ಶ್ರೀನಿವಾಸ್ ಜಿಲ್ಲಾ ಸಚಿವರನ್ನು ಮೆಚ್ಚಿಸಲು ಶಾಸಕ ಬಿ.ಪಿ.ಹರೀಶ್ ಅವರ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಕಸರತ್ತು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಆರೋಪಿಸಿದ್ದಾರೆ.

- ಹರಿಹರದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಆರೋಪ

- - -

ಕನ್ನಡಪ್ರಭ ವಾರ್ತೆ ಹರಿಹರ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗುವ ಕುರಿತು ಅನುಮಾನ ಎದುರಿಸುತ್ತಿರುವ ನಂದಿಗಾವಿ ಶ್ರೀನಿವಾಸ್ ಜಿಲ್ಲಾ ಸಚಿವರನ್ನು ಮೆಚ್ಚಿಸಲು ಶಾಸಕ ಬಿ.ಪಿ.ಹರೀಶ್ ಅವರ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಕಸರತ್ತು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಎಸ್.ರಾಮಪ್ಪ ಹಾಗೂ ಮುಖಂಡ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಮಧ್ಯೆ ಈಗಾಗಲೇ ಕಾಂಗ್ರೆಸ್ ಟಿಕೆಟ್ ಸ್ಪರ್ಧೆ ತೀವ್ರಗೊಂಡಿದೆ. ಇಬ್ಬರೂ ಜಿಲ್ಲಾಮಟ್ಟದ ನಾಯಕರನ್ನು ಮೆಚ್ಚಿಸಲು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಬಿ.ಪಿ. ಹರೀಶ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಎಂದರು.

ಶ್ರೀನಿವಾಸ್ ಧೈರ್ಯವಿದ್ದರೆ ಹರಿಹರದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಬೇಕಿತ್ತು. ಇಲ್ಲಿನ ಮಾಧ್ಯಮದವರು ಅವರ ಕಾರ್ಯವೈಖರಿ ಪ್ರಶ್ನಿಸುವ ಭಯದಿಂದ ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ದಾರೆ. ತಮ್ಮದೇ ಸರ್ಕಾರವಿದ್ದರೂ ಕಳೆದ ಎರಡೂವರೆ ವರ್ಷಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಅವರು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಇತ್ತೀಚಿಗೆ ಮಾಜಿ ಶಾಸಕ ರಾಮಪ್ಪ ಅವರು ಜಿ.ಎಂ. ಸಿದ್ದೇಶ್ವರ ವಿರುದ್ಧ ಸತ್ಯವಿಲ್ಲದ ಆರೋಪ ಮಾಡಿದ್ದರಿಂದ ಬಿಜೆಪಿ ಪ್ರತಿಭಟನೆ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಅಥವಾ ಕ್ಷಮೆ ಕೇಳುವಂತೆ ಆಗ್ರಹಿಸಿತ್ತು. ಆದರೆ ಇದುವರೆಗೆ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ. ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬಿ.ಪಿ. ಹರೀಶ್ ಶಾಸಕರಾಗಿದ್ದ ಅವಧಿಯಲ್ಲಿ ₹800 ಕೋಟಿ ಅನುದಾನದ ಯೋಜನೆಗಳನ್ನು ತಾಲೂಕಿನಲ್ಲಿ ಜಾರಿಗೊಳಿಸಲಾಗಿದೆ. ಜಿ.ಎಂ. ಸಿದ್ದೇಶ್ವರ ಸಂಸದರಾಗಿದ್ದ ವೇಳೆ ಸಾರಥಿ– ಚಿಕ್ಕಬಿದರಿ ಹಳ್ಳದ ಸೇತುವೆ, ಎಕ್ಕೆಗುಂದಿ–ನಂದಿಗಾವಿ ರಸ್ತೆ, ಎಸ್‌ಸಿ/ ಎಸ್‌ಟಿ ಕಾಲೋನಿಗಳ ಸಿಸಿ ರಸ್ತೆ ನಿರ್ಮಾಣ ಸೇರಿದಂತೆ 12ಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಅಭಿವೃದ್ಧಿಯಾಗಿವೆ. ವರ್ಗಾವಣೆ ದಂಧೆಯಲ್ಲಿ ಬ್ಯುಸಿಯಾಗಿರುವ ಶ್ರೀನಿವಾಸ್ ತಮ್ಮ ಪಕ್ಷದ ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿ ಮಾಡಿ ತಾಲೂಕಿನ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ತರಬೇಕು ಎಂದರು.

ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ ಮಾತನಾಡಿ, ತಾಲೂಕಿನಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಹೇಳುವ ಕಾಂಗ್ರೆಸ್ ಮುಖಂಡರು ಕೈಗೊಳ್ಳಬೇಕಾದ ಕೆಲಸಗಳ ಪಟ್ಟಿ ಮಾಡಲಿ. ಬಿಜೆಪಿ ನಾಯಕರ ನಿಯೋಗ ನಿಮ್ಮೊಂದಿಗೆ ಬರಲು ಸಿದ್ಧ. ದಿನಾಂಕ ನಿಗದಿಪಡಿಸಿ ಎಂದರು.

ನಗರ ಅಧ್ಯಕ್ಷ ಅಜಿತ್ ಸಾವಂತ್ ಮಾತನಾಡಿ, ಎರಡುವರೆ ವರ್ಷಗಳಲ್ಲಿ ನಿಮ್ಮ ಸರ್ಕಾರದಿಂದ ತಾಲೂಕಿಗೆ ಎಷ್ಟು ಅನುದಾನ ಬಂದಿದೆ? ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ? ಶಾಸಕರು ಕಾಣೆಯಾಗಿದ್ದಾರೆ ಎಂದು ಹೇಳುವ ನೀವು, ನಮ್ಮ ಪ್ರಕಾರ ಕಾಂಗ್ರೆಸ್ ಸರ್ಕಾರವೇ ಕಾಣೆಯಾಗಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ತುಳುಜಪ್ಪ ಭೊತೆ, ಎಚ್. ಮಂಜಾನಾಯ್ಕ್, ಗ್ರಾಮಾಂತರ ಕಾರ್ಯದರ್ಶಿಗಳಾದ ಮಹಾಂತೇಶ್, ವೀರೇಶ್ ಆದಾಪುರ, ರಮೇಶ್, ಸಂತೋಷ್ ಗುಡಿಮನಿ ಹಾಗೂ ಇತರರಿದ್ದರು.

- - -

-11HRR03:

ಹರಿಹರದ ಪತ್ರಿಕಾ ಭವನದಲ್ಲಿ ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.