ಇಂದು ಮುಕ್ಕ ಶ್ರೀನಿವಾಸ ಕಾಲೇಜು ಘಟಿಕೋತ್ಸವ

| Published : Feb 10 2024, 01:49 AM IST

ಸಾರಾಂಶ

ಭಾರತ ಸರ್ಕಾರದ ಸಲಹೆಗಾರ ಡಾ. ಸುಹಾಸ್‌ ಗೋಪಿನಾಥ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಒಟ್ಟು 1,510 ಪದವೀಧರರಿಗೆ ಪದವಿ ಪ್ರದಾನಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಶ್ರೀನಿವಾಸ ವಿಶ್ವವಿದ್ಯಾಲಯದ 6ನೇ ವಾರ್ಷಿಕ ಘಟಿಕೋತ್ಸವ ಫೆ. 10ರಂದು ಬೆಳಗ್ಗೆ 9.30ಕ್ಕೆ ಸುರತ್ಕಲ್‌ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಕುಲಸಚಿವ ಡಾ. ಅನಿಲ್‌ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಗಳೂರು ಎಂಸಿಎಫ್‌ ವೈದ್ಯಕೀಯ ಸೇವೆ ವಿಭಾಗದ ಸೀನಿಯರ್‌ ಜನರಲ್‌ ಮ್ಯಾನೇಜರ್‌ ಡಾ. ಕೆ. ಯೋಗೀಶ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಘಟಿಕೋತ್ಸವದಲ್ಲಿ 1,257ಪದವೀಧರರು (ಸ್ನಾತಕೋತ್ತರ -358, ಪದವಿ ಶಿಕ್ಷಣ - 881) ಪ್ರಮಾಣಪತ್ರ ಸ್ವೀಕರಿಸಲಿದ್ದು, ವಿಶ್ವವಿದ್ಯಾಲಯ ವಿವಿಧ ಕಾರ್ಯಕ್ರಮಗಳಿಗೆ 144 ರಾಂಕ್‌ ಪ್ರಕಟಿಸಿದೆ. 38 ಪದವೀಧರರು ಘಟಿಕೋತ್ಸವದಲ್ಲಿ ಕುಲಾಧಿಪತಿಗಳ ಚಿನ್ನದ ಪದಕ ಸ್ವೀಕರಿಸುವರು. ಘಟಿಕೋತ್ಸವದಲ್ಲಿ 1 ಡಿಎಸ್‌ಸಿ ಮತ್ತು 17 ಪಿಎಚ್‌ಡಿ ಪದವಿ ನೀಡಲಾಗುವುದು ಎಂದರು.ಶ್ರೀನಿವಾಸ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ನ ಪದವಿ ಪ್ರದಾನ ಕಾರ್ಯಕ್ರಮ ಫೆ. 11ರಂದು ಬೆಳಗ್ಗೆ 9.30 ಕ್ಕೆ ವಿವಿಯ ಮುಕ್ಕ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಭಾರತ ಸರ್ಕಾರದ ಸಲಹೆಗಾರ ಡಾ. ಸುಹಾಸ್‌ ಗೋಪಿನಾಥ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಒಟ್ಟು 1,510 ಪದವೀಧರರಿಗೆ ಪದವಿ ಪ್ರದಾನಿಸಲಾಗುವುದು. ಶ್ರೀನಿವಾಸ ವಿವಿ ಮತ್ತು ಶ್ರೀನಿವಾಸ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌ಗಳ ಸಂಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ದಿನಾಚರಣೆ ಫೆ.14 ರಂದು ಬೆಳಗ್ಗೆ 9.30ಕ್ಕೆ ವಿವಿ ಮುಕ್ಕ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದರು.ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ವಿವಿ, ಶಾಮ ರಾವ್‌ ಪ್ರತಿಷ್ಠಾನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡುತ್ತಿದ್ದು, ಉಜಿರೆ ಎಸ್‌ಡಿಎಂ ಪಿಯು ಕಾಲೇಜು ಸಂಸ್ಕೃತ ಉಪನ್ಯಾಸಕ ಡಾ. ಪ್ರಸನ್ನ ಕುಮಾರ್‌ ಐತಾಳ್‌ ಮತ್ತು ರವಿ ಅಲೆವೂರಾಯ ವರ್ಕಾಡಿ ಅವರನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಎ. ಶಾಮರಾವ್‌ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ - 2024ಕ್ಕೆ ಆಯ್ಕೆ ಮಾಡಲಾಗಿದೆ. ಸತೀಶ್‌ ಶೆಟ್ಟಿ ಪಟ್ಲ- ಯಕ್ಷಗಾನ, ವಲೇರಿಯನ್‌ ಸಲ್ಡಾನಾ- ಜ್ಯೋತಿಷ್ಯ, ಸುಲೋಚನಾ ವಿ. ಭಟ್‌ - ನೃತ್ಯ, ವಿದ್ವಾನ್‌ ಪಂಜ ಭಾಸ್ಕರ್‌ ಭಟ್‌ -ಪೌರೋಹಿತ್ಯ ಮತ್ತು ಜ್ಯೋತಿಷ್ಯ, ದಾಮೋದರ್‌ ಆಚಾರ್ಯ -ಛಾಯಾಗ್ರಹಣ, ವಾಸುದೇವ ಇಡ್ಯಾಡಿ- ಸಮಾಜಸೇವೆ, ವಿದ್ವಾನ್‌ ರಾಜೇಶ್‌ ರಾವ್‌ ಬಾಗ್ಲೋಡಿ- ವಾದ್ಯಸಂಗೀತ ಕ್ಷೇತ್ರದಲ್ಲಿ ಎ. ಶಾಮರಾವ್‌ ಸ್ಮಾರಕ ಅತ್ಯುತ್ತಮ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು. ವಿವಿ ರಿಜಿಸ್ಟ್ರಾರ್‌-ಮೌಲ್ಯಮಾಪನ ಡಾ. ಶ್ರೀನಿವಾಸ್‌ ಮಯ್ಯ, ರಿಜಿಸ್ಟ್ರಾರ್‌-ಅಭಿವೃದ್ಧಿ ಡಾ.ಅಜಯ್‌ ಕುಮಾರ್‌, ಡಾ. ರಾಮಕೃಷ್ಣ ಶಬರಾಯ ಇದ್ದರು.