ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ರಾಜ್ಯದೆಲ್ಲೆಡೆ ಪ್ರಸಿದ್ದಿ ಪಡೆದ ಅರಸೀಕೆರೆ ಶ್ರೀಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಶುಕ್ರವಾರ ಸಂಜೆ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ಶಾಸ್ತ್ರೋಕ್ತವಾಗಿ ಪೂಜೆ ಕಾರ್ಯವನ್ನು ನೆರವೇರಿಸುವ ಮೂಲಕ ವಿದ್ಯುಕ್ತ ಚಾಲನೆ ದೊರೆಯಿತು.ನಗರದಲ್ಲಿ ಬಾದ್ರಪದ ಚೌತಿಯಂದು ಪ್ರತಿಷ್ಠಾಪಿಸಿ 75 ದಿನಗಳ ಪೂಜಾ ಕೈಂಕರ್ಯ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಮಾನವನ್ನು ಸೂರೆಗೊಂಡಿದ್ದ ಶ್ರೀಪ್ರಸನ್ನ ಗಣಪತಿ 83 ವರ್ಷದ ವಿಸರ್ಜನಾ ಮಹೋತ್ಸವದ ಮೆರವಣಿಗೆಯನ್ನು ನಗರದ ಜನತೆ ಸ್ವಾಗತಿಸಲು ನಗರದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆಯನ್ನು ಮತ್ತು ಅಕ್ಕಪಕ್ಕದಲ್ಲಿನ ಕಟ್ಟಡಗಳನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳ ಸರಳ ಮಾಲೆಗಳು ಮತ್ತು ಮಾವಿನ ತಳಿರು ತೋರಣಗಳನ್ನು ಹಾಗೂ ಬಾಳೇಕಂದುಗಳನ್ನು ಕಟ್ಟಿ ನವವಧುವಿನಂತೆ ಶೃಂಗರಿಸಿದ್ದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಎಂ.ಸಮೀವುಲ್ಲಾ, ಶಾಸಕ ಶಿವಲಿಂಗೇಗೌಡ, ಉದ್ಯಮಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್ ಶ್ರೀಪ್ರಸನ್ನ ಗಣಪತಿ ಭಕ್ತ ಮಂಡಲಿ ಕಾರ್ಯದರ್ಶಿ ಎಸ್.ವಿ.ಟಿ ಬಾಬು, ಖಜಾಂಚಿ ನಾಗಭೂಷಣ್, ನಿರ್ದೇಶಕರಾದ ರವಿಂದ್ರನಾಥ್, ಕುಮಾರಸ್ವಾಮಿ, ಬಿ.ಎಸ್.ಬಸವರಾಜು, ಸ್ವಾಮಿ, ಮಲೇಶ್ ಪದಾಧಿಕಾರಿಗಳು, ನಗರ ಪೊಲೀಸ್ ನಿರೀಕ್ಷಕ ರಾಘವೇಂದ್ರ, ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಗರದ ನಾಗರಿಕರು ಭಾಗವಹಿಸಿದ್ದರು.ಮುಸ್ಲಿಂ ಜಮಾತ್ ಕಮಿಟಿಯಿಂದ ನಗರದ ಹುಳಿಯಾರ್ ವೃತ್ತಕ್ಕೆ ಶ್ರೀ ಪ್ರಸನ್ನ ಗಣಪತಿ ಮೆರವಣಿಗೆ ಆಗಮಿಸಿದಾಗ ಬೃಹತ್ ಬೃಹತ್ ಹೂವಿನ ಹಾರವನ್ನು ಸಮರ್ಪಿಸಿದರು. ಶುಕ್ರವಾರ ರಾತ್ರಿ ಪ್ರಾರಂಭಗೊಂಡ ಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆಯಲ್ಲಿ ಶಾಸಕ ಶಿವಲಿಂಗೇಗೌಡ ಸೇರಿದಂತೆ ರಾಜ್ಯದ ವಿವಿಧ ಊರುಗಳಿಂದ ಮತ್ತು ತಾಲೂಕಿನ ಗ್ರಾಮೀಣ ಪ್ರದೇಶದಿಂದ ಸಾವಿರಾರು ಭಕ್ತಾದಿಗಳು ಸಡಗರ ಸಂಭ್ರಮದಿಂದ ಭಾಗವಹಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.ಗಣಪತಿಯ ಮೆರವಣಿಗೆ ಸಾರ್ವಜನಿಕ ಗ್ರಂಥಾಲಯ ಮಾರ್ಗವಾಗಿ ಸಂತೇಪೇಟೆ, ಶಿವಾಲಯ, ಪೇಟೆಬೀದಿ, ಹಾಸನ ರಸ್ತೆ ಚೌಕ, ಮಾರ್ಕೇಟ್ ಚೌಕ, ರೈಲ್ವೆ ನಿಲ್ದಾಣ ರಸ್ತೆ, ಬಸವೇಶ್ವರ ವತ್ತ, ಬಿ.ಹೆಚ್.ರಸ್ತೆ, ಮಾರ್ಕೆಟ್ ಚೌಕ, ಗ್ರಂಥಾಲಯ ರಸ್ತೆ, ಯಜಮಾನ್ ರಂಗೇಗೌಡರ ಬೀದಿ, ಶಾನುಭೋಗರ ಬೀದಿ, ಕರಿಯಮ್ಮ ದೇವರ ಬೀದಿ, ಗರುಡನಗಿರಿ ರಸ್ತೆ, ಸಂತೆ ಮೈದಾನ, ಸಾಯಿನಾಥ ರಸ್ತೆ, ಸುಭಾಷ್ ನಗರದ ಮತ್ತು ಲಕ್ಷ್ಮೀಪುರದ ನಿರಂಜನ್ ವೃತ್ತ, ನಂತರ ಮಿನಿವಿಧಾನ ಸೌಧ, ಕೃಷಿ ಉತ್ಪನ್ನ ಮಾರುಕಟ್ಟೆ ನಂತರ ಬಿ.ಎಚ್.ರಸ್ತೆ ಮಾರ್ಗವಾಗಿ ಶನಿವಾರ ಸಂಜೆ ಕಂತೇನಹಳ್ಳಿ ಕೆರೆಯ ಬಳಿಗೆ ಬರಲಿದೆ.
ಈ ಮೆರವಣಿಗೆಯಲ್ಲಿ ಕೀಲು ಕುದುರೆ ನರ್ತನ, ಡೊಳ್ಳು ಕುಣಿತ, ವೀರಭದ್ರ ದೇವರ ಕುಣಿತ, ಭದ್ರಕಾಳಿ ಕುಣಿತ, ರಾಣಿಬೆನ್ನೂರು ರೋಡ್ ಆರ್ಕೆಸ್ಟ್ರಾ, ಕಹಳೇ ವಾದ್ಯ, ನಂದೀಧ್ವಜ, ಕುಣಿತ ಹುಲಿವೇಶದ ಕುಣಿತ, ತಮಟೆ, ಚಂಡೇ ವಾದ್ಯಗಳ ಚಮತ್ಕಾರ ಹಾಗೂ ಗೊಂಬೆಯಾಟ ಡಿಜೆ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚಿನ ಜಾನಪದ ಕಲಾ ತಂಡಗಳು ಅದ್ಧೂರಿ ಮೆರವಣಿಗೆಯಲ್ಲಿ ಪಾಲ್ಗೊಂಡು ನಾಗರಿಕರಿಗೆ ಮನರಂಜನೆ ನೀಡಿದರು.