ಶ್ರೀರಾಮುಲು ಸೋಲಿನ ಭಯದಲ್ಲಿ ಪುನರ್ಜನ್ಮ ಬೇಡುತ್ತಿದ್ದಾರೆ: ತುಕಾರಾಂ

| Published : May 04 2024, 12:33 AM IST

ಸಾರಾಂಶ

ಈ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದ್ಯಾರ್ಹತೆಯನ್ನೇ ಬಹಿರಂಗ ಪಡಿಸಿಲ್ಲ. ಇನ್ನು ದೇಶದ ವ್ಯವಸ್ಥೆಯನ್ನು ಯಾರ ರೀತಿಯಲ್ಲಿ ಮುಚ್ಚಿ ಇಟ್ಟಿರಬಹುದು.

ಹೂವಿನಹಡಗಲಿ: ಬಿಜೆಪಿಯ ಅಭ್ಯರ್ಥಿ ಬಿ.ಶ್ರೀರಾಮುಲುಗೆ ಸೋಲಿನ ಭಯ ಎದುರಾಗಿದೆ. ಮತದಾರರ ಬಳಿ ಬಂದು ಮತ್ತೆ ಪುನರ್ಜನ್ಮ ಕೊಡಿ ಎಂದು ಬೇಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಆಯೋಜಿಸಿದ್ದ ಮತಯಾಚನೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಯ ಮತದಾರರು ಶ್ರೀರಾಮುಲುಗೆ ಮಣೆ ಹಾಕಿದ್ದರು. ಅದನ್ನು ಸದುಪಯೋಗ ಪಡಿಸಿಕೊಳ್ಳದೇ ಮತ್ತೆ ಮತದಾರ ಮುಂದೆ ಬಂದು ನನಗೆ ಕಷ್ಟ ಬಂದಿದೆ. ರಾಜಕೀಯದಲ್ಲಿ ನನಗೆ ಪುನರ್ಜನ್ಮ ಕೊಡಿ ಎನ್ನುತ್ತಿದ್ದಾರೆ. ಒಂದು ಬಾರಿ ಪ್ರಜೆಗಳು ಪುನರ್ಜನ್ಮದ ಅವಕಾಶವನ್ನು ಬಳಕೆ ಮಾಡಿಕೊಳ್ಳದಿದ್ದರೆ ಹೇಗೆ? ಪ್ರತಿ ಬಾರಿ ಜನರ ಮುಂದೆ ಬಂದು ಸುಳ್ಳುಗಳನ್ನು ಹೇಳಿ ಮೋಸ ಮಾಡಿದವರಿಗೆ ರಾಜಕೀಯ ಪುನರ್ಜನ್ಮ ಕೊಡಬೇಡಿ ಎಂದರು.

ಈ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದ್ಯಾರ್ಹತೆಯನ್ನೇ ಬಹಿರಂಗ ಪಡಿಸಿಲ್ಲ. ಇನ್ನು ದೇಶದ ವ್ಯವಸ್ಥೆಯನ್ನು ಯಾರ ರೀತಿಯಲ್ಲಿ ಮುಚ್ಚಿ ಇಟ್ಟಿರಬಹುದು. ನೀವೇ ಯೋಚಿಸಿ, ಈ ಬಾರಿಯ ಲೋಕಸಭಾ ಚುನಾವಣೆಯು ದೇಶದ ಭವಿಷ್ಯವನ್ನೇ ನಿರ್ಧರಿಸಲಿದೆ. ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಮತ ನೀಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್ ಮಾತನಾಡಿ, ಕಾಂಗ್ರೆಸ್ ತಾನು ಮಾಡಿರುವ ಸಾಧನೆಗಳನ್ನು ಮತದಾರರಿಗೆ ಹೇಳಿ ಮತ ಕೇಳುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜನರಿಗೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅವುಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಿ ಜನರ ಮನೆ ಬಾಗಿಲಿಗೆ ನೀಡಿದ್ದೇವೆ. ಆದರೆ ಬಿಜೆಪಿಯಲ್ಲಿ ತೋರಿಸಲು ಯಾವ ಸಾಧನೆಗಳಿಲ್ಲ. ಅವರಿಗೆ ಉಳಿದಿರೋದು ಕೇವಲ ನರೇಂದ್ರ ಮೋದಿ ಮಾತ್ರ. ಅದಕ್ಕಾಗಿಯೇ ಮೋದಿ ಮುಖ ನೋಡಿ ಮತ ಹಾಕಿ ಎಂದು ಬೇಡುತ್ತಿದ್ದಾರೆಂದು ವ್ಯಂಗ್ಯವಾಡಿದರು.

ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರ ಕಳೆದ ಎರಡು ಅವಧಿಯಲ್ಲಿ ಸರ್ಕಾರಗಳನ್ನು ಉರುಳಿಸುವಲ್ಲಿಯೇ ಕಾಲಹರಣ ಮಾಡಿದೆ. ಉಳಿದಂತೆ ಇಡಿ, ಸಿಬಿಐ, ಐಟಿ ಅಧಿಕಾರಿಗಳ ಮೂಲಕ ದಾಳಿ ಮಾಡಿ ಬೆದರಿಸಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವ ಸಂಚು ರೂಪಿಸುತ್ತಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡಲು ಬಿಜೆಪಿಯೇ ಮೂಲ ಕಾರಣವಾಗಿದೆ. ಈ ಬಾರಿ ಬಿಜೆಪಿಯನ್ನು ಪೂರ್ಣ ತಿರಸ್ಕಾರ ಮಾಡಿ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಜಿಪಂ ಮಾಜಿ ಸದಸ್ಯರಾದ ಪಿ. ವಿಜಯಕುಮಾರ, ಜಿ.ವಸಂತ, ಬ್ಲಾಕ್ ಅಧ್ಯಕ್ಷರಾದ ಅಟವಾಳಿಗಿ ಕೊಟ್ರೇಶ, ಬಿ.ಹನುಮಂತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಸೋಗಿ ಹಾಲೇಶ, ದೂದಾನಾಯ್ಕ ಸೇರಿದಂತೆ ಇತರರಿದ್ದರು.