ಶ್ರೀರಾಮುಲುಗೆ ಟಿಕೆಟ್ ನೀಡಿದರೆ ಸೋಲು ಖಚಿತ: ಶಾಸಕ ರೆಡ್ಡಿ

| Published : Mar 10 2024, 01:32 AM IST

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಿದರೆ ಸೋಲು ಖಚಿತ ಎನ್ನುವುದು ಸರ್ವೆ ರಿಪೋರ್ಟ್‌ನಲ್ಲಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಗಂಗಾವತಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ನೀಡಿದರೆ ಸೋಲು ಖಚಿತ ಎನ್ನುವುದು ಸರ್ವೆ ರಿಪೋರ್ಟ್‌ನಲ್ಲಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಆನೆಗೊಂದಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಶ್ರೀರಾಮುಲು ಸೋಲುತ್ತಾರೆ ಎನ್ನುವುದು ನನ್ನ ಅಭಿಪ್ರಾಯ ಅಲ್ಲ, ಅದನ್ನು ಸರ್ವೇ ರಿಪೋರ್ಟ್‌ನಲ್ಲೇ ಹೇಳಲಾಗಿದೆ. ರಾಮುಲುಗೆ ಟಿಕೆಟ್ ನೀಡಬೇಕೆಂದು ಹೇಳುವುದಕ್ಕೆ ನಾನು ಬಿಜೆಪಿ ರಾಜ್ಯಾಧ್ಯಕ್ಷನೂ ಅಲ್ಲ, ಆ ಪಕ್ಷದ ಕೋರ್ ಕಮಿಟಿ ಸದಸ್ಯನೂ ಅಲ್ಲ. ರಾಮುಲುಗೆ ಟಿಕೆಟ್ ನೀಡಲು ವಿರೋಧಿಸುತ್ತಿದ್ದೇನೆ ಎಂಬುದು ಕೇವಲ ವದಂತಿ ಎಂದು ಸ್ಪಷ್ಟಪಡಿಸಿದರು.

ಸೋಲುವ ವ್ಯಕ್ತಿಗೆ ಬಿಜೆಪಿ ಹೇಗೆ ಟಿಕೆಟ್ ಕೊಡಲು ಸಾಧ್ಯ? ಇದು ಬಿಜೆಪಿ ನಾಯಕರಿಗೆ ಗೊತ್ತಿರುವ ವಿಷಯ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಎಲ್ಲ ಸರ್ವೇಗಳಲ್ಲಿ ರಾಮುಲು ಸೋಲುತ್ತಾರೆ ಎಂಬ ವರದಿ ಇತ್ತು. ಅದು ಸತ್ಯವೂ ಆಯಿತು ಎಂದರು.ಕೆಲ ನಾಯಕರಲ್ಲಿ ಶ್ರೀರಾಮುಲು ಸೋತರೆ ತಮ್ಮ ಸ್ಥಾನಕ್ಕೆ ಕುತ್ತು ಬರಬಹುದೆಂಬ ಆತಂಕ ಇದೆ. ಹೀಗಿರುವಾಗ ಜವಾಬ್ದಾರಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯಲ್ಲಿ ದೆಹಲಿಯಲ್ಲೊಂದು, ರಾಜ್ಯದಲ್ಲಿ ಬಿಜೆಪಿ ಜವಾಬ್ದಾರಿ ತೆಗೆದುಕೊಂಡವರಿಗೆ ವಿರೋಧ ಮಾಡುವ ಮತ್ತೊಂದು ಬಣವೂ ಇದೆ ಎಂದರು.

ಯಾವುದೇ ಕಾರಣಕ್ಕೂ ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಆದರೆ ಬಿಜೆಪಿಯವರು ಹೊಂದಾಣಿಕೆಗೆ ಸಿದ್ಧರಿದ್ದರೆ ಮಾತ್ರ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವೆ ಎಂದರು.