ಸಾರಾಂಶ
ಬಳ್ಳಾರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸೋತಿರುವುದು ನಮಗೆ ತೀವ್ರ ಬೇಸರವಿದೆ. ಎಲ್ಲಿ ಸೋತಿದ್ದಾರೋ ಅಲ್ಲಿಂದಲೇ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯ ಆರಂಭಿಸಿ, ಗೆದ್ದು ತೋರಿಸುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಗೋವಿಂದಪ್ಪ ಕಲ್ಯಾಣಮಂಟಪದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಈ ಬಾರಿ ಬಿಜೆಪಿ 370 ಸೇರಿದಂತೆ ಒಟ್ಟಾರೆಯಾಗಿ ಎನ್‌ಡಿಎಗೆ 400ಸ್ಥಾನಗಳು ಲಭಿಸಲಿದೆ ಎಂದು ಸರ್ವೇ ವರದಿಗಳು ಹೇಳುತ್ತಿವೆ. ಹೀಗಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲು ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಯನ್ನು ಕನಿಷ್ಠ 50ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏರು-ಪೇರುಗಳನ್ನು ಕಂಡಿದ್ದೇನೆ. ವಿಧಾನಸಭೆಯಲ್ಲಿ ಸೋತಿರುವುದು ನನಗೆ ನೋವು ತಂದಿದೆ. ಆದರೆ, ಸೋತರೂ ಪಕ್ಷದ ಹೈಕಮಾಂಡ್ ನನ್ನ ಮತ್ತು ಕಾರ್ಯಕರ್ತರ ಮೇಲೆ ನಂಬಿಕೆಯಿಟ್ಟು ಬಳ್ಳಾರಿ ಲೋಕಸಭೆಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ನಮ್ಮ ಸೋಲನ್ನು ನೋಡಿ ಖುಷಿ ಪಟ್ಟವರಿಗೆ ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಗೆದ್ದು ಉತ್ತರ ನೀಡುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಬಿ.ಓಬಳೇಶ್, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ನೂರ್‌ಬಾಷಾ, ಮುಖಂಡರಾದ ವಿಜಯಲಕ್ಷ್ಮಿ, ಶಿವಕೃಷ್ಣ, ಗುತ್ತಿಗನೂರು ವಿರೂಪಾಕ್ಷ ಪ್ಪ ಗೌಡ, ಎಚ್.ಹನುಮಂತಪ್ಪ, ಗಾಳಿ ಶಂಕ್ರಪ್ಪ, ಡಾ.ಅರುಣ ಕಾಮಿನೇನಿ, ಮಂಡಲದ ಅಧ್ಯಕ್ಷರಾದ ಎಚ್.ಮಲ್ಲಿಕಾರ್ಜುನಗೌಡ, ನಾಗರಾಜ ರೆಡ್ಡಿ ಸೇರಿದಂತೆ ಪಕ್ಷದ ಜಿಲ್ಲಾ ಘಟಕದ ಮುಖಂಡರು ಉಪಸ್ಥಿತರಿದ್ದರು.ಕುರುಬರ ಕಡೆಗಣನೆ; ಆಕ್ರೋಶಪಕ್ಷದಲ್ಲಿ ನನ್ನನ್ನು ಹಾಗೂ ನಮ್ಮ ಕುರುಬ ಸಮುದಾಯವನ್ನು ಕಡೆಗಣಿಸುತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆಯಲು ಯತ್ನಿಸಿದ ಪ್ರಸಂಗ ಜರುಗಿತು.ವೇದಿಕೆ ಸಮಾರಂಭದಲ್ಲಿ ಭಾಷಣ ಆರಂಭಿಸುತ್ತಿದ್ದಂತೆಯೇ ತನ್ನ ಅಳಲು ತೋಡಿಕೊಂಡ ರಾಮಲಿಂಗಪ್ಪ, ಕುರುಬ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ಪಕ್ಷದ ಬ್ಯಾನರ್‌ನಲ್ಲಿ ನನ್ನ ಫೋಟೋ ಸಹ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ವೇದಿಕೆಯಿಂದ ಹೊರನಡೆಯಲು ಮುಂದಾದರು. ಬಳಿಕ ಪಕ್ಷದ ಮುಖಂಡರು ರಾಮಲಿಂಗಪ್ಪ ಅವರನ್ನು ಸಮಾಧಾನ ಪಡಿಸಿ ವೇದಿಕೆಗೆ ಕರೆತಂದರು.