ಆದಿರಂಗ ನೆಲೆವೀಡು ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಂದ ಸೇವಾ ಕಾಣಿಕೆ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಧನುರ್ಮಾಸದ ಹಿನ್ನೆಲೆಯಲ್ಲಿ ದೇಗುಲಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಈ ಸಮಯವನ್ನೇ ಬಳಸಿಕೊಂಡು ದುಬಾರಿ ಹಣ ಪಡೆಯುತ್ತಿರುವುದು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.

ಎಲ್.ವಿ.ನವೀನ್‌ಕುಮಾರ್

ಶ್ರೀರಂಗಪಟ್ಟಣ:

ಆದಿರಂಗ ನೆಲೆವೀಡು ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಂದ ಸೇವಾ ಕಾಣಿಕೆ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಧನುರ್ಮಾಸದ ಹಿನ್ನೆಲೆಯಲ್ಲಿ ದೇಗುಲಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಈ ಸಮಯವನ್ನೇ ಬಳಸಿಕೊಂಡು ದುಬಾರಿ ಹಣ ಪಡೆಯುತ್ತಿರುವುದು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.

ಸೇವಾ ಕಾಣಿಕೆ ಹೆಸರಿನಲ್ಲಿ ೫೦೦ ರು. ಪಡೆಯುವಂತೆ ಸರ್ಕಾರವಾಗಲೀ, ಜಿಲ್ಲಾಡಳಿತವಾಗಲಿ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆದೇಶ ಮಾಡಿಲ್ಲ. ಆದರೂ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಉಮಾ ಅವರು ಯಾವುದೇ ಅನುಮತಿ ಪಡೆಯದೆ ಸೇವಾ ಕಾಣಿಕೆ ರೂಪದಲ್ಲಿ ಶ್ರೀರಂಗನಾಥಸ್ವಾಮಿ ದರ್ಶನಕ್ಕೆ ಒಬ್ಬರಿಗೆ ೫೦೦ ರು. ನಿಗದಿಪಡಿಸಿ ಪಡೆಯುತ್ತಿದ್ದಾರೆ. ಇದು ಕಾಣಿಕೆ ಹೆಸರಿನಲ್ಲಿ ಭಕ್ತರಿಂದ ಹಣ ಲೂಟಿ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಶ್ರೀರಂಗನಾಥಸ್ವಾಮಿ ದೇವಾಲಯ ಪ್ರವೇಶ ದರವನ್ನು ೧೦ ರು. ಮತ್ತು ೫೦ ರು.ಗೆ ನಿಗದಿಪಡಿಸಲಾಗಿದೆ. ಈ ನಡುವೆ ಸೇವಾ ಕಾಣಿಕೆ ಹೆಸರಿನಲ್ಲಿ ಒಬ್ಬರಿಗೆ ೫೦೦ ರು. ನಿಗದಿಪಡಿಸಿ ನಿತ್ಯ ಬರುವ ಸಾವಿರಾರು ಭಕ್ತರಿಂದ ಅನಧಿಕೃತವಾಗಿ ಪಡೆಯಲಾಗುತ್ತಿದೆ. ಯಾವುದೇ ಆದೇಶವಿಲ್ಲದಿದ್ದರೂ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ೫೦೦ ರು. ಶುಲ್ಕ ಹೇಗೆ ನಿಗದಿಪಡಿಸಿದರೆಂಬುದು ತೀವ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರವೇಶದರ ಹೆಚ್ಚಳಕ್ಕೆ ದೇಗುಲದಿಂದ ನಮಗೆ ಯಾವ ಪ್ರಸ್ತಾವನೆಯೂ ಬಂದಿಲ್ಲ. ನಾವೂ ಕೂಡ ಪ್ರವೇಶದರ ಹೆಚ್ಚಳ ಮಾಡಿಲ್ಲ. ಅವರು ಯಾವ ಕಾರಣಕ್ಕೆ ಸೇವಾ ಕಾಣಿಕೆ ಹೆಸರಿನಲ್ಲಿ ಹಣ ಪಡೆಯುತ್ತಿದ್ದಾರೋ ನಮಗೆ ಗೊತ್ತಿಲ್ಲ. ನಮ್ಮಿಂದ ಯಾವುದೇ ದರವನ್ನೂ ಹೆಚ್ಚಿಸಿಲ್ಲ ಎಂದು ಮುಜರಾಯಿ ಇಲಾಖೆ ತಹಸೀಲ್ದಾರ್ ಎನ್.ತಮ್ಮೇಗೌಡ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಒಂದೇ ವಾರಕ್ಕೆ ೩೧.೫೭ ಲಕ್ಷ ರು. ಸಂಗ್ರಹ

ಸೇವಾ ಕಾಣಿಕೆ ೫೦೦ ರು. ನಿಗದಿಪಡಿಸಿದ ಹಿನ್ನೆಲೆಯಲ್ಲಿ ಒಂದೇ ವಾರಕ್ಕೆ ೭೮೭೦ ಜನರಿಂದ ೩೧.೫೭ ಲಕ್ಷ ರು. ಸಂಗ್ರಹವಾಗಿದೆ. ಅದೇ ೧೭ ಡಿಸೆಂಬರ್ ೨೦೨೫ ರಿಂದ ಈವರೆಗೆ ೫೦ ರು. ಪ್ರವೇಶ ಶುಲ್ಕದೊಂದಿಗೆ ೫೪,೪೨೯ ಜನರಿಂದ ೨೭,೨೧,೪೫೦ ರು. ಸಂಗ್ರಹವಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ನಿತ್ಯ ೫ ರಿಂದ ೬ ಸಾವಿರ ಜನರು ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಪ್ರತಿಯೊಬ್ಬರ ಪ್ರವೇಶಕ್ಕೆ ೫೦೦ ರು. ನಿಗದಿಪಡಿಸಿರುವುದರಿಂದ ನಿತ್ಯ ಲಕ್ಷಾಂತರ ರು. ಹರಿದುಬರುತ್ತಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಸರಿಯಾದ ಮೂಲಸೌಲಭ್ಯ ಒದಗಿಸಿಲ್ಲ. ದಾಸೋಹ ಕಾರ್ಯಕ್ರಮವೂ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಕಾಣಿಕೆ ರೂಪದಲ್ಲಿ ಭಕ್ತರಿಂದ ಪಡೆಯುವಂತಿದ್ದರೆ ಹುಂಡಿಯನ್ನು ಇಡಬೇಕು. ಪ್ರವೇಶಕ್ಕೆ ೫೦೦ ರು. ಹಣವನ್ನು ಯಾವ ಮಾನದಂಡ ಅನುಸರಿಸಿದ್ದಾರೆ ಎನ್ನುವುದು ಪ್ರಶ್ನಾರ್ಹ ಸಂಗತಿಯಾಗಿದೆ.

ಧನುರ್ಮಾಸದಲ್ಲಿ ಭಕ್ತರು ಹೆಚ್ಚಳ

ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಧನುರ್ಮಾಸ ಸಮಯದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಧನುರ್ಮಾಸ ಅವಧಿಯಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಒಂದೇ ದಿನದಲ್ಲಿ ಶ್ರೀರಂಗಪಟ್ಟಣದ ಆದಿರಂಗ, ಮಳವಳ್ಳಿ ತಾಲೂಕಿನ ಶಿವನಸಮುದ್ರ ಸಮೀಪವಿರುವ ಮಧ್ಯರಂಗ ಹಾಗೂ ತಮಿಳುನಾಡಿನ ಶ್ರೀರಂಗಂನಲ್ಲಿರುವ ಅಂತ್ಯರಂಗ ಕ್ಷೇತ್ರಗಳ ದರ್ಶನ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ಇದೆ. ಹಾಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಇದನ್ನೇ ಈ ಬಂಡವಾಳ ಮಾಡಿಕೊಂಡು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂಜಾನೆಯೇ ದೇಗುಲಕ್ಕೆ ಪ್ರವೇಶ

ಧನುರ್ಮಾಸ ಸಮಯದಲ್ಲಿ ಮುಂಜಾನೆ ೪ ಗಂಟೆಗೆ ದೇವಾಲಯದ ಬಾಗಿಲನ್ನು ತೆರೆದು ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ದೂರದ ಊರುಗಳಿಂದ ಬರುವ ಭಕ್ತರು ದೇವರ ದರ್ಶನ ಮಾಡದೆ ಹಿಂದಿರುಗುವುದಿಲ್ಲ. ಸೇವಾ ಕಾಣಿಕೆ ಹೆಸರಿನಲ್ಲಿ ೫೦೦ ರು. ನಿಗದಿಪಡಿಸಿರುವ ವಿಷಯ ತಿಳಿಯದೆ ದುಬಾರಿಯಾದರೂ ಟಿಕೆಟ್ ಪಡೆದು ದೇವರ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ವೈಕುಂಠ ಏಕಾದಶಿ ಅಂಗವಾಗಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಸಮಯದಲ್ಲಿ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೊಂದಿಗೆ ಶ್ರೀರಂಗನಾಥಸ್ವಾಮಿಯ ದರ್ಶನಕ್ಕೆ ನಿತ್ಯವೂ ಭಕ್ತಸಾಗರವೇ ಹರಿದುಬರುತ್ತಿದೆ. ದೇಗುಲದ ಹೆಸರಿನಲ್ಲಿ ಕೋಟ್ಯಂತರ ರು. ಆಸ್ತಿ

ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ರಾಜ್ಯದ ಎ-ಗ್ರೇಡ್ ದೇವಾಲಯಗಳ ಪಟ್ಟಿಯಲ್ಲಿದೆ. ಬೆಂಗಳೂರು ಜಿಲ್ಲೆ ತಾವರೆಕೆರೆ ಹೋಬಳಿಯ ಬ್ಯಾಲಾಳು, ಪದ್ಮನಪಾಳ್ಯ, ಜೋಳನಾಯಕನಹಳ್ಳಿ, ದೊಡ್ಡಮಾರನಹಳ್ಳಿ, ಕುರುಬರಹಳ್ಳಿ ಹಾಗೂ ಕಾಡುಕಾರೇನಹಳ್ಳಿ ಗ್ರಾಮಗಳ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು ೮೮೧.೧೫ ಎಕರೆ ಖುಷಿ ಜಮೀನು ಮತ್ತು ೧೭.೧೯ ಎಕರೆ ತರಿ ಜಮೀನನ್ನು ದ್ವಾರಕಾಬಾಯಿ ವೇದಾತಂ ಎಂಬುವರು ಈ ದೇವಾ ಲಯಕ್ಕಾಗಿ ಅಂದಿನ ಮೈಸೂರು ಸರ್ಕಾರದ ಮುಜರಾಯಿ ಕಮೀಷನರ್ ಹೆಸರಿಗೆ ದಾನವಾಗಿ ನೀಡಿದ್ದರು.

ಕಂದಾಯ ದಾಖಲೆಯ ಭೂಮಿ ತಂತ್ರಾಂಶದಲ್ಲಿ ಒಟ್ಟು ೧೫೫.೨೨ ಎಕರೆ ವಿಸ್ತೀರ್ಣದ ಜಮೀನು ದೇವರ ಹೆಸರಿನಲ್ಲಿ ಪಹಣಿ ಆಗಿದೆ. ಇದಲ್ಲದೆ, ೧೮ ಕೆಜಿ ಚಿನ್ನ, ೧೨೧.೫೮ ಕೆಜಿ ಬೆಳ್ಳಿ ಆಭರಣಗಳು ಭಕ್ತರಿಂದ ಕಾಣಿಕೆಯಾಗಿ ಬಂದಿವೆ. ನಿಶ್ಚಿತ ಠೇವಣಿಯಲ್ಲಿ ೧೫.೬೮ ಕೋಟಿ ರು. ಹಾಗೂ ವಿವಿಧ ಉಳಿತಾಯ ಖಾತೆಗಳಲ್ಲಿ ೯೩.೩೫ ಲಕ್ಷ ರು. ಸಂಗ್ರಹವಿದೆ. ಸೇವಾ ಕಾಣಿಕೆ ಕಡ್ಡಾಯವೇನಲ್ಲ. ಇಚ್ಛೆಪಟ್ಟು ಕೊಟ್ಟರೆ ಕೊಡಬಹುದು. ಅದು ಪ್ರವೇಶ ಶುಲ್ಕಕ್ಕೆ ಅನ್ವಯಿಸುವುದಿಲ್ಲ. ಪ್ರವೇಶ ಶುಲ್ಕ ಮಾಮೂಲಿನಂತೆ 50 ರು. ಇದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಭಕ್ತರು ಆತಂಕಕ್ಕೆ ಒಳಗಾಗುವುದು ಬೇಡ. 50 ರು. ಪಾವತಿಸಿ ದೇವರ ದರ್ಶನ ಮಾಡಬಹುದು.

- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ

ಸೇವಾ ಕಾಣಿಕೆ ಹೆಸರಿನಲ್ಲಿ ಪ್ರತಿಯೊಬ್ಬ ಭಕ್ತರಿಂದ ೫೦೦ ರು. ಪಡೆಯುವುದಕ್ಕೆ ನಾವು ಯಾವುದೇ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆ ಹಣ ಪಡೆಯುವುದು ತಪ್ಪು. ಇದರ ಬಗ್ಗೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕರೆದು ವಿಚಾರಿಸುತ್ತೇನೆ. ವಸೂಲಿ ಮಾಡುತ್ತಿರುವುದು ದೃಢಪಟ್ಟರೆ ಕೈಬಿಡುವಂತೆ ಸೂಚಿಸಲಾಗುವುದು.

-ಬಿ.ಸಿ.ಶಿವಾನಂದಮೂರ್ತಿ ಅಪರ ಜಿಲ್ಲಾಧಿಕಾರಿ, ಮಂಡ್ಯ

ನಾವು ಪ್ರವೇಶದರವನ್ನು ಹೆಚ್ಚಳ ಮಾಡಿಲ್ಲ. ಸೇವಾ ಕಾಣಿಕೆ ಎಂಬುದಾಗಿ ಪಡೆಯುತ್ತಿದ್ದೇವೆ. ಅದನ್ನೂ ಭಕ್ತರಿಂದ ಬಲವಂತವಾಗಿ ಪಡೆಯುತ್ತಿಲ್ಲ. ದೇವಾಲಯಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಗಣ್ಯರು-ಅಧಿಕಾರಿಗಳ ಹೆಸರೇಳಿಕೊಂಡು ಒಳಹೋಗಲು ಪ್ರಯತ್ನಿಸುತ್ತಿದ್ದಾರೆ. ಆ ಕಾರಣಕ್ಕೆ ೫೦೦ ರು. ಸೇವಾ ಕಾಣಿಕೆ ಪಡೆಯಲಾಗುತ್ತಿದೆ.

- ಎಂ.ಉಮಾ, ಕಾರ್ಯನಿರ್ವಾಹಕ ಅಧಿಕಾರಿ, ಶ್ರೀರಂಗನಾಥಸ್ವಾಮಿ ದೇವಸ್ಥಾನ

ಸೇವಾ ಕಾಣಿಕೆ ಹೆಸರಿನಲ್ಲಿ ದೇವಾಲಯದ ಅಧಿಕಾರಿಗಳು ಭಕ್ತರಿಂದ ಲೂಟಿ ಹೊಡೆಯಲು ಮುಂದಾಗಿದ್ದಾರೆ. ಈಗ ಭಕ್ತರಿಂದ ೫೦೦ ರು. ಹಣ ಪಡೆಯುತ್ತಿದ್ದು ಕನಿಷ್ಠ ಅವರಿಗೆ ಲಾಡು ಹಾಗೂ ಕುಂಕುಮ ಪ್ರಸಾದ ನೀಡುತ್ತಿಲ್ಲ. ಭಕ್ತರಿಗೆ ಲಾಡು ಪ್ರಸಾದ ನೀಡಿ ಎಂದರೆ ಮೇಲಧಿಕಾರಿಗಳಿಂದ ಆದೇಶ ಬರೆಬೇಕು ಎನ್ನುತ್ತಾರೆ. ಆದರೆ, ೫೦೦ ರು. ಪಡೆಯಲು ಮೇಲಧಿಕಾರಿಗಳ ಯಾವುದೇ ಆದೇಶ ಬೇಡವೇ. ಯಾವುದೇ ಆದೇಶವಿಲ್ಲದೆ ಭಕ್ತರಿಂದ ಪಡೆಯುತ್ತಿರುವ ಹಣವನ್ನು ನಿಲ್ಲಿಸಬೇಕು.

- ಶಂಕರ್‌ಬಾಬು, ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ