ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಜಂಬೂ ಸವಾರಿ ಮೆರವಣಿಗೆಯೂ ಗುರುವಾರ ಅದ್ಧೂರಿಯಾಗಿ ನೆರವೇರಿತು.ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹದ ಅಂಬಾರಿ ಹೊತ್ತ ಮಹೇಂದ್ರ ಗಜ ಗಾಂಭೀರ್ಯದ ನಡಿಗೆ ಮೂಲಕ ಜಂಬೂ ಸವಾರಿಯ ಕೇಂದ್ರ ಬಿಂದುವೆನಿಸಿತು. ಮಹೇಂದ್ರನಿಗೆ ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿ ಮೆರವಣಿಗೆ ಸೊಬಗು ಹೆಚ್ಚಿಸಿದವು.
ಕಿರಂಗೂರು ಬನ್ನಿಮಂಟಪದ ಬಳಿ ಮಧ್ಯಾಹ್ನ ಹಿರಿಯ ನಟ ಹಾಗೂ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಮೂಲಕ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ವೈಭವವನ್ನು ನೆನಪಿಸಿತು.ಇದಕ್ಕೂ ಮುನ್ನ ಬನ್ನಿಮಂಟಪದಲ್ಲಿ ವಿಶೇಷವಾಗಿ ವಿವಿಧ ಬಗೆಯ ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿದ್ದ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ವೇದಬ್ರಹ್ಮ ಡಾ.ಭಾನುಪ್ರಕಾಶ್‌ಶರ್ಮಾ ನೇತೃತ್ವದಲ್ಲಿ ವೈದಿಕ ತಂಡ ಮೊದಲಿಗೆ ಸ್ಥಳಶುದ್ಧಿ, ಗಣಪತಿ ಹೋಮ, ಪುಣ್ಯಾಹ, ದುರ್ಗಾಶಪ್ತಸತಿ ಪಾರಾಯಣ, ಬನ್ನಿಪೂಜೆ, ಶತವೃದ್ರಪಾರಾಯಣ, ಕೂಷ್ಮಾಂಡ ಛೇದನ, ಮಹಾಮಂಗಳಾರತಿ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ದಂಪತಿ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ದಂಪತಿ ಸಮೇತ ಪೂಜೆಯಲ್ಲಿ ಪಾಲ್ಗೊಂಡು ಬನ್ನಿವೃಕ್ಷ ಪೂಜೆ ನೆರವೇರಿಸಿದರು. ಬನ್ನಿಮಂಟಪದಿಂದ ಹೊರಟ ಅಂಬಾರಿ ಮೆರವಣಿಗೆಯು ಕಿರಂಗೂರು, ಬಾಬುರಾಯನಕೊಪ್ಪಲು ಮಾರ್ಗವಾಗಿ ಬೆಂಗಳೂರು - ಮೈಸೂರು ಹೆದ್ದಾರಿ ಮೂಲಕ ಶ್ರೀರಂಗಪಟ್ಟಣ ಮುಖ್ಯ ದ್ವಾರವನ್ನು ಪ್ರವೇಶಿಸಿತು.ಪಟ್ಟಣದ ಮುಖ್ಯ ರಸ್ತೆಗಳ ಇಕ್ಕೇಲಗಳಲ್ಲಿ ಸಾರ್ವಜನಿಕರು ಅಂಬಾರಿ ಮೆರವಣಿಗೆ ಹಾಗೂ ಕಲಾತಂಡಗಳ ಸೊಬಗನ್ನು ಕಣ್ತುಂಬಿಕೊಂಡರು. ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿ ನಿರ್ಮಾಣಗೊಂಡಿರುವ ಶ್ರೀರಂಗ ವೇದಿಕೆ ಬಳಿ ಮೆರವಣಿಗೆಯನ್ನು ಅಂತ್ಯಗೊಳಿಸಲಾಯಿತು.
ಮೆರವಣಿಗೆಯಲ್ಲಿ ನಾದಸ್ವರ, ಬ್ಯಾಂಡ್‌ಸೆಟ್, ರೋವರ್ಸ್, ನಂದಿಧ್ವಜ, ಪೂಜಾಕುಣಿತ, ತಾಯಮ್, ಚಂಡೆಮೇಳ, ತಮಟೆ, ನಗಾರಿ, ಪಟಕುಣಿತ, ಹುಲಿವೇಷ, ವೀರಗಾಸೆ, ವೀರ ಭದ್ರಕುಣಿತ, ಕಾಳಿ ಕುಣಿತ, ಕುಚುಪುಡಿ, ಕಂಸಾಳೆ, ವೀರ ಮಕ್ಕಳ ಕುಣಿತ, ಒನಕೆ ಕುಣಿತ, ಕೋಲಾಟ, ಕರಗದ ಕೋಲಾಟ, ಕತಕಳಿ, ನಾಸಿಕ್ ಡೋಲು, ಗಾರುಡಿ ಗೊಂಬೆ, ಚಿಲಿಪಿಲಿ ಗೊಂಬೆ, ಭಜರಂಗಿ, ಗೊಂಬೆಕುಣಿತ, ಕೊಂಬು ಹಕಳೆ, ಕೀಲಿಕುದುರೆ, ದೊಳ್ಳು ಕುಣಿತ, ಕಂಗಿಲು ಕುಣಿತ, ಬೆಂಕಿಬರಾಟೆ, ದೊಣ್ಣೆವರಸೆ, ಸೋಮನ ಕುಣಿತ, ಬೇಡರ ವೇಷ, ಹಾಲಕ್ಕಿ ಸುಗ್ಗಿ ಕುಣಿತ ಸೇರಿದಂತೆ ಇತರೆ ಕಲಾತಂಡಗಳ ಪ್ರದರ್ಶನ ಮೆರಗು ನೀಡಿದವು.ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಭಾರತೀಯ ಬೌದ್ದ ಮಹಾಸಭಾ ವತಿಯಿಂದ ಸಾಮಾಜಿಕ ಕಾಳಜಿಯುಳ್ಳ ಹತ್ತಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಸಾಗಿದವು.
ಬನ್ನಿಮಂಟಪದ ಬಳಿ ವಿಶೇಷ ಪೂಜೆ ಹಾಗೂ ಅಂಬಾರಿ ಮೆರವಣಿಗೆ ಚಾಲನೆ ನೀಡುವ ದೃಷ್ಯವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಬೆಂಗಳೂರು- ಮೈಸೂರು ಹೆದ್ದಾರಿ ಬನ್ನಿಮಂಟಪ ಮುಂಭಾಗ, ಪಟ್ಟಣದ ಪುರಸಭೆ ವೃತ್ತ ಸೇರಿದಂತೆ ಇತರೆಡೆಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು.ಈ ವೇಳೆ ಮಂಡ್ಯ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ನಂದಿನಿ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್ ಸೇರಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.