ಸಾರಾಂಶ
ಕಳೆದ ವರ್ಷದಂತೆ ಈ ವರ್ಷವೂ ಸಹ ಯಶಸ್ವಿಯಾಗಿ ದಸರಾ ಉತ್ಸವವನ್ನು ನಡೆಸಲು ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು. ವೇದಿಕೆ ನಿರ್ಮಾಣದಲ್ಲಿ ಯಾವುದೇ ಲೋಪವಿಲ್ಲದಂತೆ ಆಗಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣ ದಸರಾ ಹಿನ್ನೆಲೆ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ ದಸರಾ ಬನ್ನಿಮಂಟಪ ಹಾಗೂ ವೇದಿಕೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿದರು.ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದ ಶ್ರೀರಂಗ ವೇದಿಕೆ ಕಾಮಗಾರಿ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿ ದಸರಾ ಉದ್ಘಾಟನಾ ಸ್ಥಳವಾದ ಕಿರಂಗೂರು ಬನ್ನಿಮಂಟಪಕ್ಕೆ ಭೇಟಿ ನೀಡಿ ಸುಣ್ಣ- ಬಣ್ಣ ಪೂರ್ಣಗೊಂಡಿರುವ ಬಗ್ಗೆ ವೀಕ್ಷಣೆ ಮಾಡಿದರು.
ನಂತರ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಕಳೆದ ವರ್ಷದಂತೆ ಈ ವರ್ಷವೂ ಸಹ ಯಶಸ್ವಿಯಾಗಿ ದಸರಾ ಉತ್ಸವವನ್ನು ನಡೆಸಲು ಎಲ್ಲಾ ಅಧಿಕಾರಿಗಳು ಸಹಕಾರ ನೀಡಬೇಕು. ವೇದಿಕೆ ನಿರ್ಮಾಣದಲ್ಲಿ ಯಾವುದೇ ಲೋಪವಿಲ್ಲದಂತೆ ಆಗಬೇಕು ಎಂದರು.ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲು ರಚಿಸಲಾಗುವ ವಿವಿಧ ಸಮಿತಿಗಳು ಯಾವುದೇ ಲೋಪ ಬಾರದಂತೆ ವಹಿಸಿರುವ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಡೆಸಬೇಕು. ವೇದಿಕೆ ಬಳಿ ವಿವಿಧ ಇಲಾಖೆಗಳಿಂದ ಮಳಿಗೆ ನಿರ್ಮಾಣ ಮಾಡಿ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಅಗತ್ಯ ಕ್ರಮ ವಹಿಸಲು ಮತ್ತು ಬನ್ನಿಮಂಟಪ ಹಾಗೂ ವೇದಿಕೆ ನಿರ್ಮಾಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.
ಪೊಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವುದು, ವಾಹನಗಳ ನಿಲುಗಡೆಗೆ ಸರಿಯಾದ ಸ್ಥಳವನ್ನು ನಿಗದಿಪಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸುವಂತೆ ಅಗತ್ಯ ಸಲಹೆಗಳನ್ನು ನೀಡಿದರು.ಈ ವೇಳೆ ತಾಪಂ ಇಒ ವೇಣು ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.