ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಸಿರುವ ಜಮೀನಿನಲ್ಲಿ ಅಕ್ರಮವಾಗಿ ವಸತಿ ಬಡಾವಣೆ ನಿರ್ಮಿಸಲು ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿ ಪ್ರತ್ಯೇಕ ನಿವೇಶಗಳಿಗೆ ಇ-ಸ್ವತ್ತು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ದಾಖಲೆ ಪರಿಶೀಲನೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕಿರಂಗೂರು ಗ್ರಾಪಂ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಅನ್ಯಕ್ರಾಂತ ಮಾಡಿಸಿರುವ ಜಮೀನಿನಲ್ಲಿ ಅಕ್ರಮವಾಗಿ ವಸತಿ ಬಡಾವಣೆ ನಿರ್ಮಿಸಲು ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿ ಪ್ರತ್ಯೇಕ ನಿವೇಶಗಳಿಗೆ ಇ-ಸ್ವತ್ತು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ದಾಖಲೆ ಪರಿಶೀಲನೆ ನಡೆಸಿದರು.

ರೈತ ಹೋರಾಟಗಾರ ಕಿರಂಗೂರು ಪಾಪು ಅವರ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಸುರೇಶಬಾಬು ನೇತೃತ್ವದ ಅಧಿಕಾರಿಗಳ ತಂಡ ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಹಾಗೂ ಕಿರಂಗೂರು ಗ್ರಾಪಂ ಕಚೇರಿಗೆ ಪ್ರತ್ಯೇಕವಾಗಿ ಸೋಮವಾರ ಮತ್ತು ಮಂಗಳವಾರ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಕಲೆ ಹಾಕಿದರು.

ಕಿರಂಗೂರು ಗ್ರಾಮದ ಸರ್ವೇ ನಂ.1085/2 ರಲ್ಲಿ 0.29 ಗುಂಟೆ, 1080/1 ರಲ್ಲಿ 0.16 ಗುಂಟೆ, 1079/1ರಲ್ಲಿ 0.20 ಗುಂಟೆ, 1080/2 ರಲ್ಲಿ 1 ಎಕರೆ, 0.8 ಸೇರಿದಂತೆ ಒಟ್ಟು 2 ಎಕರೆ 0.33 ಗುಂಟೆ ಜಮೀನುಗಳನ್ನು ವಾಣಿಜ್ಯ ಉದ್ಧೇಶಕ್ಕೆ ಅನ್ಯ ಕ್ರಾಂತ ಮಾಡಿಸಿಕೊಂಡಿದ್ದು, ಇದರಲ್ಲಿ ಅಕ್ರಮವಾಗಿ ವಸತಿ ಬಡಾವಣೆ ಉದ್ದೇಶಕ್ಕೆ ನಕಲಿ ಬಹು ವಿನ್ಯಾಸ ನಕ್ಷೆ ತಯಾರಿಸಿದ್ದಾರೆ.

ಜೊತೆಗೆ ಪ್ರತ್ಯೇಕ ನಿವೇಶಗಳಿಗೆ ಹಿಂದಿನ ತಾಪಂ ಇಒ ಎ.ಬಿ.ವೇಣು ಹಾಗೂ ಕಿರಂಗೂರು ಗ್ರಾಪಂ ಹಿಂದಿನ ಅಭಿವೃದ್ಧಿ ಅಧಿಕಾರಿ ಪಿ.ಎ.ಪ್ರಶಾಂತ್‌ಬಾಬು ಅಕ್ರಮವಾಗಿ ಇ-ಸ್ವತ್ತು ನೀಡಿದ್ದರು. ಅಲ್ಲದೆ ವಾಣಿಜ್ಯ ಉದ್ದೇಶಕ್ಕೆ ಎಂದು ಪರಿವರ್ತಿಸಿ ಅಕ್ರಮವಾಗಿ ವಸತಿ ಬಡಾವಣೆ ನಿರ್ಮಿಸಿರುವುದರಿಂದ ಸರ್ಕಾರಕ್ಕೆ ತೆರಿಗೆಯಲ್ಲಿ ಲಕ್ಷಾಂತರ ರು ನಷ್ಟ ಉಂಟಾಗಿದೆ ಎಂದು ಕಿರಂಗೂರು ಪಾಪು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ತಾಪಂ ಇಒ ಚಂದ್ರ ಅವರಿಂದ ಮಾಹಿತಿ ಪಡೆದುಕೊಂಡರು.

ಲೋಕಾಯುಕ್ತ ಎಸ್ಪಿ ಸುರೇಶಬಾಬು, ಡಿವೈಎಸ್ಪಿ ಸುನಿಲ್‌ಕುಮಾರ್, ಇನ್ಸ್‌ ಪೆಕ್ಟರ್‌ ಬ್ಯಾಟರಾಯಗೌಡ, ರವಿಕುಮಾರ್, ಲೇಪಾಕ್ಷಮೂರ್ತಿ ಅವರ ನೇತೃತ್ವದ ತಂಡ ತಾಪಂ ಹಾಗೂ ಗ್ರಾಪಂಗೆ ಕಚೇರಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.