ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀರಂಗಟಪ್ಟಣ ದಸರಾ ಉದ್ಘಾಟನೆಗೆ ಒಬ್ಬರನೇ ಎರಡೆರಡು ಬಾರಿ ಆಹ್ವಾನಿಸಿದ್ದೀರಿ. ದಸರಾ ಕುರಿತು ಕೇವಲ ಕಾಟಾಚಾರಕ್ಕೆ ಪೂರ್ವಭಾವಿ ಸಭೆ ಕರೆದಿದ್ದೀರಿ. ಈ ಬಾರಿ ಸಾರ್ವಜನಿಕರ ದಸರಾ ಆಗದೆ ಕೇವಲ ಶಾಸಕರು ಹಾಗೂ ಅಧಿಕಾರಿಗಳ ದಸರಾವಾಗಿದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು.ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಸಿಇಒ ನಂದಿನಿ, ಡಿವೈಎಸ್ಪಿ ಶಾಂತಮಲ್ಲಪ್ಪ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಸಾಧನೆಗೈದವರಿಗೆ ಮೊದಲ ಆದ್ಯತೆ ನೀಡಿ ದಸರಾ ಉದ್ಘಾಟನೆಗೆ ಕರೆ ತರಬೇಕು. ಅದು ಬಿಟ್ಟು ಈಗಾಗಲೆ ಒಂದು ಬಾರಿ ದಸರಾ ಉದ್ಘಾಟನೆ ಮಾಡಿದ್ದ ಟಿ.ಎಸ್.ನಾಗಾಭರಣ ಅವರನ್ನೇ ಮತ್ತೊಮ್ಮೆ ಆಹ್ವಾನಿಸಿದ್ದೀರಿ. ಸ್ಥಳೀಯರ ಸಲಹೆ ಸೂಚನೆ ಪಡೆಯದ ಕಾರಣದಿಂದ ಇಂತಹ ತಪ್ಪು ನಿರ್ಧಾರವಾಗಿದೆ ಎಂದರು.ಕಳೆದ ವರ್ಷ ಮುಜಾರಾಯಿ ಇಲಾಖೆ ದೇವಾಲಯದಿಂದ 18 ಲಕ್ಷ ಕ್ಕೂ ಅಧಿಕ ಹಣವನ್ನು ಶ್ರೀನಿಮಿಷಾಂಬ ದೇವಾಲಯದಿಂದ ಪಡೆದಿದ್ದೀರಿ. ಒಂದು ವೇಳೆ ಹೆಚ್ಚಿಗೆ ಹಣ ಬೇಕಾದಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿಕೊಳ್ಳಬೇಕು. ಅಲಹಾಬಾದ್ ಹೈಕೋರ್ಟ್ ಸ್ಪಷ್ಟವಾಗಿ ಆಯಾ ದೇವಾಲಯಗಳ ಹಣವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತೆ ಆದೇಶ ಮಾಡಿದೆ. ಆದರೂ ಅಧಿಕಾರಿಗಳು ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡಲ್ಲ. ಪ್ರತಿ ಭಾರಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕಲಾವಿದರನ್ನು ಕರೆಯಿಸಿ ದುಪ್ಪಟ್ಟು ಹಣ ನೀಡಿ ಸ್ಥಳೀಯ ಕಲಾವಿದರನ್ನು ಕಡೆಗಣಿಸುತ್ತಿದ್ದೀರಿ ಎಂದು ರೈತ ಹೋರಾಟಗಾರ ಕಿರಂಗೂರು ಪಾಪು ಆರೋಪಿಸಿದರು.
ಶ್ರೀರಂಗಟಪ್ಟಣ ದಸರಾದಲ್ಲಿ ಕೇವಲ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರನ್ನು ಮಾತ್ರವಲ್ಲದೆ ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ಸಹ ಕಡೆಗಣಿಸಿದ್ದೀರಿ. ಮೈಸೂರು ದಸರಾ ಆಚರಣೆಯಲ್ಲಿ 15 -20 ದಿನಗಳ ಮುಂಚಿತವಾಗಿ ಪಟ್ಟಣವನ್ನೇ ವಿದ್ಯುತ್ ದೀಪಾಲಂಕಾರದಿಂದ ಅಲಂಕಾರ ಮಾಡುತ್ತಾರೆ. ಆದರೆ, ರಂಗನಾಥಸ್ವಾಮಿ ದೇವಾಲಯ ಕತ್ತಲಲ್ಲಿದೆ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಗೌಡಹಳ್ಳಿ ದೇವರಾಜು ಆರೋಪಿಸಿದರು.ಪ್ರತಿ ಭಾರಿ ಅಧಿಕಾರಿಗಳ ಜೊತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸಮಿತಿಗೆ ಸೇರಿಸಿಕೊಳ್ಳುತ್ತಿದ್ದೀರಿ. ಈ ಬಾರಿ ಕಡೆಗಣಿಸಿದ್ದೀರಿ. ಇದೇ ರೀತಿ ಸಂಘಟನೆಗಳ ಮುಖಂಡರನ್ನು ಕಡೆಗಣಿಸಿ ಕೇವಲ ಅಧಿಕಾರಿಗಳೇ ಮುಂದಾದರೆ ದಸರಾ ಆಚರಣೆ ವೇಳೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಕರವೇ ಜಿಲ್ಲಾ ಕಾರ್ಯದರ್ಶಿ ಸ್ವಾಮೀಗೌಡ ಎಚ್ಚರಿಸಿದರು.
ಪ್ರತಿ ಬಾರಿ ಶ್ರೀರಂಗಪಟ್ಟಣ ದಸರಾ ಆಚರಣೆ ಖರ್ಚು ವೆಚ್ಚಗಳನ್ನು ನೀಡುವಂತೆ ಕೇಳುತ್ತಿದ್ದರೂ ನೀಡುತ್ತಿಲ್ಲ. ಕೇವಲ ಕಾಟಾಚಾರಕ್ಕೆ ಅಂತಿಮ ದಿನಗಳಲ್ಲಿ ಪೂರ್ವಭಾವಿ ಸಭೆ ಕರೆಯುತ್ತಿದ್ದೀರಿ. ನಮ್ಮ ಸಲಹೆಗಳು ಈಗ ಕೇಳಿ ಅದನ್ನು ಕಾರ್ಯಗತಕ್ಕೆ ತರಲು ಹೇಗೆ ಸಾಧ್ಯ ಎಂದು ರೈತ ಮುಖಂಡ ನಾಗೇಂದ್ರಸ್ವಾಮಿ ಆರೋಪಿಸಿದರು.ನಂತರ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ಸ್ಥಳೀಯರನ್ನು ಕಡೆಗಣಿಸಿಲ್ಲ. ಬದಲಿಗೆ ಒಂದಿಷ್ಟು ವ್ಯತ್ಯಾಸಗಳಾಗಿವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಳ್ಳಲಾಗುವುದು. ಕಳೆದ ದಸರಾ ಆಚರಣೆ ಲೆಕ್ಕ ಪತ್ರ ಕೇಳಿದ್ದೀರಿ, ಆಡಿಟ್ ನಡೆಯುತ್ತಿದ್ದು ಮುಗಿದ ಕೂಡಲೇ ನೀಡುವುದಾಗಿ ಹೇಳಿದರು.
ಶ್ರೀರಂಗಟಪ್ಟಣ ದಸರಾ ಪ್ರಯುಕ್ತ ಸೆ.25 ರಂದು ನಡೆಯುವ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಭಿತ್ತಿಪತ್ರವನ್ನು ಶಾಸಕರು ಹಾಗೂ ಅಧಿಕಾರಿಗಳು ಬಿಡುಗಡೆ ಮಾಡಿದರು. ಈ ವೇಳೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಸಾರ್ವಜನಿಕರು ಇದ್ದರು.