ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಿರಂಗೂರು ಮತ್ತು ದರಸಗುಪ್ಪೆ ಗ್ರಾಮಗಳ ನಡುವಿನ ಐತಿಹಾಸಿಕ ಮೂಲೆ ಮಂಟಪವನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಪಟ್ಟಣದ ಡಿವೈಎಸ್‌ಪಿ ಕೃಷ್ಣಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಡಿವೈಎಸ್‌ಪಿ ಕಚೇರಿಗೆ ಕಿರಂಗೂರು ಮತ್ತು ದರಸಗುಪ್ಪೆ ಸೇರಿದಂತೆ ಇತರೆ ಗ್ರಾಮಗಳ ಗ್ರಾಮಸ್ಥರು ಭೇಟಿ ನೀಡಿ, ಸುಮಾರು 200 ವರ್ಷಗಳ ಇತಿಹಾಸ ಇರುವ ಮೂಲೆ ಮಂಟಪವನ್ನು ಯಾರೋ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಷಕ್ಕೊಮ್ಮೆ ನಡೆಯುವ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವರ ವೈರಮುಡಿ ಹಾಗೂ ರಾಜಮುಡಿಯನ್ನು ಈ ಮಂಟಪದಲ್ಲಿ ಇಟ್ಟು ಪೂಜೆ ಸಲ್ಲಿಸಿ ನಂತರ ತೆರಳುತ್ತಿತ್ತು. ಕಳೆದ 2 ದಿನಗಳ ಹಿಂದೆ ಜಮೀನಿನ ಮಾಲೀಕರೊಬ್ಬರು ಉದ್ದೇಶ ಪೂರ್ವಕವಾಗಿ ಧ್ವಂಸ ಮಾಡಿ ನೆಲಸಮ ಗೊಳಿಸಿದ್ದಾರೆ ಎಂದು ಆರೋಪಿಸಿದರು.ಈವರೆವಿಗೂ ಕಂದಾಯ ಇಲಾಖೆ, ಪಾರಂಪರಿಕ ಕಟ್ಟಡಗಳ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ ಯಾವ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಅಲ್ಲದೇ, ಸುತ್ತಮುತ್ತಲಿನ ಗ್ರಾಮಸ್ಥರು ಜೊತೆಗೂಡಿ ಘಟನಾ ಸ್ಥಳದಲ್ಲಿ ಪ್ರತಿಭಟನೆ ಮುಂದಾದ ವೇಳೆ ಮಂಟಪದ ಹಿಂಭಾಗದ ಜಮೀನಿನ ಮಾಲೀಕ ರೆಡ್ಡಿ ಎಂಬ ವ್ಯಕ್ತಿ ತಮ್ಮ ಜಮೀನಿಗೆ ಅನುಕೂಲವಾಗಿದೆ ಎಂಬ ಕಾರಣದಿಂದ ಹಣ ನೀಡಿ ಧ್ವಂಸ ಮಾಡಿರುವುದಾಗಿ ಸ್ಥಳೀಯ ರೈತರುಗಳಿಂದ ತಿಳಿದು ಬಂದಿದೆ ಎಂದರು.
ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಉಪ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸೇರಿದಂತೆ ಪೊಲೀಸರು ಆಗಮಿಸಿ ಮಂಟಪವನ್ನು ಧ್ವಂಸ ಗೊಳಸಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಜೊತೆಗೆ ಮತ್ತೆ ಮಂಟಪವನ್ನ ಪರುಸ್ಥಾಪಿಸುವ ಸಂಬಂಧ ಮೇ 15 ರ ಬೆಳಿಗ್ಗೆ 10.30ಕ್ಕೆ ಮೇಲಾಧಿಕಾರಿಗಳೊಂದಿಗೆ ಹಾಜರಾಗುವುದಾಗಿ ತಿಳಿಸಿದ್ದರಿಂದ ಪ್ರತಿಭಟನೆ ಸ್ಥಗಿತಗೊಳಸಿದ್ದೇವೆ ಎಂದರು.
ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಅವರ ಒತ್ತಾಯಿಸಿ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಡಿ.ಬಿ ರುಕ್ಮಾಂಗದ, ಮೇಹೇಶ್, ಯೋಗೇಶ್, ದೇವಾರಾಜು, ಬಾಬು, ಕೇಶವ, ಗಂಜಾಂ ಅಭಿ, ಕಿರಂಗೂರಿನ ಅಶೋಕ್, ಕೇಶವ, ನಾಗ, ಆಕಾಶ್, ದರಸಗುಪ್ಪೆ ಮಂಜುನಾಥ್, ಪರಮೇಶ್, ಸಾಗರ್ ಸೇರಿದಂತೆ ಇತರರು ಇದ್ದರು.