ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಂಬಿಗರಹಳ್ಳಿಯ ಪವಿತ್ರ ತ್ರಿವೇಣಿ ಸಂಗಮದಲ್ಲಿ ಶ್ರೀಸಂಗಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅವರು ಶ್ರೀಸಂಗಮೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನವರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶ್ರೀಸಂಗಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಜಾತಿ ಮತಗಳಿಂದ ಮುಕ್ತರಾಗಿ ಎಲ್ಲರೂ ಒಂದಾಗಿ ಭಾಗವಹಿಸಿ ಶ್ರೀರಥದ ಕಳಸಕ್ಕೆ ಹಣ್ಣು ಧವನವನ್ನು ಸಮರ್ಪಿಸಿ ರಥವನ್ನು ಎಳೆದು ಸಂಭ್ರಮಿಸಿದ್ದಾರೆ ಎಂದರು.ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವ ಭಕ್ತಾದಿಗಳು ತ್ರಿವೇಣಿ ಸಂಗಮ ತೀರ್ಥ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಗಮೇಶ್ವರರ ಕ್ಷೇತ್ರದ ಪಾವಿತ್ರ್ಯತೆ ಎತ್ತಿ ಹಿಡಿಯುವ ಮೂಲಕ ಸಮಾಜಕ್ಕೆ ಹೊಸ ಸಂದೇಶ ಸಾರಿದ್ದಾರೆ ಎಂದರು.
ಜೀವ ನದಿಗಳಾದ ಹೇಮಾವತಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಜೀವಂತವಾಗಿ ಒಂದಾಗಿ ಸೇರುವ ಈ ಪವಿತ್ರ ಕ್ಷೇತ್ರವು ಜನರ ಕಣ್ಣಿಗೆ ಕಾಣದೆ ಮರೆಯಾಗಿತ್ತು. ಈ ಭಾಗದ ಜನರ ಸಂಘಟಿತ ಆಸಕ್ತಿಯ ಫಲವಾಗಿ ಎರಡು ಬಾರಿ ಕುಂಭಮೇಳ ನಡೆದು ಸಹಸ್ರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸಿ ಪವಿತ್ರ ಸ್ನಾನ ಮಾಡಿ ತ್ರಿವೇಣಿ ಸಂಗಮದ ಬಗ್ಗೆ ನಾಡಿಗೆ ಹೊಸ ಸಂದೇಶ ನೀಡಿದ್ದರು ಎಂದರು.
ರಥವನ್ನು 25 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಸಿದ್ಧಗೊಳಿಸಲಾಗಿತ್ತು. ನಿರೀಕ್ಷೆಗೂ ಮೀರಿ ಭಕ್ತಾದಿಗಳು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.
ಸಮಿತಿ ಸಂಚಾಲಕರಾದ ಅಂಚಿ ಸಣ್ಣಸ್ವಾಮಿಗೌಡ ಮಾತನಾಡಿ, ತಾಲೂಕು ಕೇಂದ್ರದಿಂದ 25 ಕಿ.ಮೀ ದೂರದ ತ್ರಿವೇಣಿ ಸಂಗಮ ಸುಕ್ಷೇತ್ರಕ್ಕೆ ಭಕ್ತಾದಿಗಳು ಆಗಮಿಸಲು ಬಸ್ ಸೌಲಭ್ಯವಿಲ್ಲ, ಮೂಲ ಸೌಲಭ್ಯಗಳು ದೊರೆಯುತ್ತಿಲ್ಲ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.ತಾಲೂಕಿನ ಅಂಬಿಗರ ಹಳ್ಳಿ, ಸಂಗಾಪುರ, ಪುರ ಗ್ರಾಮಗಳ ಜನರು ಹಾಗೂ ಇತರೆಡೆಯ ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.