ಸಾರಾಂಶ
ಸಂಡೂರಿನ ಶ್ರೀಶೈಲ ಆಲದಹಳ್ಳಿ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಡೂರು: ಪರಿಸರ, ಸಾಮಾಜಿಕ ಕಾರ್ಯಕರ್ತ, ಜನ ಸಂಗ್ರಾಮ ಪರಿಷತ್‌ನ ರಾಜ್ಯ ಸಮಿತಿ ಉಪಾಧ್ಯಕ್ಷ, ಸಂಡೂರಿನ ಶ್ರೀಶೈಲ ಆಲದಹಳ್ಳಿ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವದ ನಿಮಿತ್ತ ಬಳ್ಳಾರಿಯಲ್ಲಿ ಶುಕ್ರವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಮ್ಮಿಕೊಂಡಿದ್ದ ಪ್ರಶಶ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಪರಿಸರವಾದಿ ಶ್ರೀಶೈಲ ಆಲದಹಳ್ಳಿ ಅವರಿಗೆ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಪರಿಸರ ಜಾಗೃತಿಯನ್ನು ಉತ್ತೇಜಿಸುವ ಮತ್ತು ಮಾಲಿನ್ಯ ಮುಕ್ತ ಕರ್ನಾಟಕದ ನಿರ್ಮಾಣದ ಗುರಿಯ ಸಂದೇಶ ಸಾರುವಲ್ಲಿ ಶ್ರೀಶೈಲ ಆಲದಹಳ್ಳಿ ಅವರ ಕಾರ್ಯವನ್ನು ಪ್ರಶಸ್ತಿ ಪತ್ರದಲ್ಲಿ ಶ್ಲಾಘಿಸಲಾಗಿದೆ.
ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ್ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ, ಪರಿಸರ ಸಂರಕ್ಷಣೆ, ಗಣಿ ಬಾಧಿತ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕುರಿತ ಹೋರಾಟ ಮುಂತಾದ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಜನ ಸಂಗ್ರಾಮ ಪರಿಷತ್‌ನ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ ಶ್ರೀಶೈಲ ಆಲದಹಳ್ಳಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.ಸಂಡೂರು ಭಾಗದಲ್ಲಿನ ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆ, ಪರಿಸರ ಸಂಬಂಧಿ ವಿಷಯಗಳು, ಜಿಲ್ಲಾ ಖನಿಜ ನಿಧಿ, ಕೆಎಂಇಆರ್‌ಸಿ ಮುಂತಾದ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಂತೆ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಶ್ರೀಶೈಲ ಆಲದಹಳ್ಳಿ ಒಬ್ಬರು. ಅವರಿಗೆ ದೊರೆತ ಪ್ರಶಸ್ತಿ ಪರಿಸರವಾದಿಗಳ ಮೆಚ್ಚುಗೆಗೆ ಪಾತ್ರವಾಗಿದೆ.