ಗುಂಡಾಪುರ ಗೇಟ್ ಬಳಿ ಭಕ್ತಿ ಭಾವದಿಂದ ನಡೆದ ಶ್ರೀಶನೇಶ್ವರ ಜಯಂತಿ

| Published : Mar 03 2025, 01:50 AM IST

ಸಾರಾಂಶ

ದೇವಸ್ಥಾನದ ಬಸಪ್ಪ ಹಾಗೂ ದೇವಸ್ಥಾನದ ಬಾಲ ಅರ್ಚಕರಾದ ಹೇಮಂತ್ ಕುಮಾರ್, ಮಡಿವಾಳ ಹಾಸಿದ ಮಡಿ ಮೇಲೆ ನಡೆದು ಹೋಗಿ ದೇವಸ್ಥಾನದ ಬಳಿಯ ಅರಳಿ, ಬೇವಿನ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಮುಖ್ಯದ್ವಾರಗಳಿಗೆ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಎಳ್ಳುಬತ್ತಿ ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಗುಂಡಾಪುರ ಗೇಟ್ ಬಳಿಯ ಶ್ರೀಶನೇಶ್ವರಸ್ವಾಮಿ ಜಯಂತಿ ನಿಮಿತ್ತ ಅಪಾರ ಭಕ್ತರು ಭಕ್ತಿ ಪೂರಕವಾಗಿ ಪೂಜೆ ಸಲ್ಲಿಸಿದರು.

ದೇವಾಲಯದ ಕಲ್ಲಿನ ಏಳು ದ್ವಾರಗಳ ಸ್ಥಾಪನೆ, ಪೂಜಾ ಕಾರ್ಯಕ್ರಮವು ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು. ಸ್ವಾಮಿ ಜಯಂತಿ, ಶ್ರೀಬಸಪ್ಪನವರ ಪಾದಪೂಜೆ, ಮಹಾ ಮಂಗಳಾರತಿ ನಡೆದ ನಂತರ ಅನ್ನ ಸಂತರ್ಪಣೆ ನಡೆಯಿತು.

ದೇವಸ್ಥಾನದ ಬಸಪ್ಪ ಹಾಗೂ ದೇವಸ್ಥಾನದ ಬಾಲ ಅರ್ಚಕರಾದ ಹೇಮಂತ್ ಕುಮಾರ್, ಮಡಿವಾಳ ಹಾಸಿದ ಮಡಿ ಮೇಲೆ ನಡೆದು ಹೋಗಿ ದೇವಸ್ಥಾನದ ಬಳಿಯ ಅರಳಿ, ಬೇವಿನ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಮುಖ್ಯದ್ವಾರಗಳಿಗೆ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಎಳ್ಳುಬತ್ತಿ ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ಶನಿಮಹಾತ್ಮ ದೇವಸ್ಥಾನವು ಮುಖ್ಯರಸ್ತೆಯಲ್ಲಿ ಇರುವುದರಿಂದ ಇನ್ನೂ ಬಹಳ ಅಭಿವೃದ್ಧಿ ಕೆಲಸ ನಡೆಯಬೇಕಿದೆ. ಗ್ರಾಮದವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಕೂಡ ತಾವು ನೆರವು ನೀಡಿದರೆ ಈ ದೇವಸ್ಥಾನ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಶನೇಶ್ವರ ಎಂದರೆ ಭಕ್ತಾದಿಗಳಿಗೆ ಸ್ವಲ್ಪ ಭಯ ಇರುತ್ತದೆ. ಶನೇಶ್ವರ ಸ್ವಾಮಿ ನನ್ನನ್ನು ಕರೆಸಿಕೊಂಡಿದ್ದಾನೆ. ಹಲಗೂರು ಹೋಬಳಿ ನೀರಾವರಿ ವಂಚಿತ ಪ್ರದೇಶ. ಮಳೆ ಆಶ್ರಯದಲ್ಲಿ ಕೊಳವೆ ಬಾವಿಗಳ ನೆರವಿನಿಂದ ರೇಷ್ಮೆ ಸಾಕಾಣಿಕಗೆ ಹಿಪ್ಪು ನೇರಳೆ ಬೆಳೆ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ದೇವರ ಆಶೀರ್ವಾದ ಎಲ್ಲರಿಗೂ ದೊರೆಯಲಿದೆ ಎಂದರು.

ರೈತರಿಗೆ ಬೆಳೆ ಬೆಳೆಯಲು ಹಾಗೂ ಸುಖ ಶಾಂತಿ ಜೀವನ ನಡೆಸುವುದಕ್ಕಾಗಿ ಸಕಾಲಕ್ಕೆ ಮಳೆಯಾಗಿ ರೈತರಿಗೆ ವ್ಯವಸಾಯಕ್ಕೆ, ಪ್ರಾಣಿಗಳಿಗೆ ಕುಡಿಯುವುದಕ್ಕೆ ನೀರಿಗೆ ತೊಂದರೆ ಆಗದಂತೆ ಎಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ದೇವಸ್ಥಾನದ ಮೇಲ್ವಿಚಾರಕ ರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಎಚ್.ಬಸಾಪುರ ಗ್ರಾಪಂ ಅಧ್ಯಕ್ಷೆ ಮುತ್ತಮ್ಮ, ಹಲಗೂರು ಗ್ರಾಪಂ ಉಪಾಧ್ಯಕ್ಷೆ ಲತಾ ಮಹದೇವು, ದಳವಾಯಿ ಕೋಡಿಹಳ್ಳಿ ಮುಖಂಡರಾದ ತಮ್ಮಣ್ಣ, ಮಾದೇಗೌಡ, ಬಾಲ ಶನಿ ಮಹಾತ್ಮ ಅರ್ಚಕರಾದ ಹೇಮಂತ್ ಕುಮಾರ್, ರಾಜು, ನಾಗರಾಜು, ಬಸವರಾಜು, ಪುಟ್ಟಸ್ವಾಮಿ ಮತ್ತು ಇತರರು ಇದ್ದರು.