ಸಾರಾಂಶ
ನನ್ನ ಹುಟ್ಟುಹಬ್ಬದ ನಿಮಿತ್ತ ಕುಬಟೂರು ನಿಂದ ಹಿಡಿದು ಶಿವಮೊಗ್ಗದವರಿಗೆ ದಾರಿಯಲ್ಲೆಡೆ ಜನರ ಹಾರೈಕೆ ಸಿಕ್ಕಿದೆ. ಜನರ ಅಭಿಮಾನದ ಹಿನ್ನೆಲೆ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ: ನನ್ನ ಹುಟ್ಟುಹಬ್ಬದ ನಿಮಿತ್ತ ಕುಬಟೂರು ನಿಂದ ಹಿಡಿದು ಶಿವಮೊಗ್ಗದವರಿಗೆ ದಾರಿಯಲ್ಲೆಡೆ ಜನರ ಹಾರೈಕೆ ಸಿಕ್ಕಿದೆ. ಜನರ ಅಭಿಮಾನದ ಹಿನ್ನೆಲೆ ನನ್ನ ಜವಾಬ್ದಾರಿ ಹೆಚ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪನವರಿಗೆ ಅಭಿಮಾನಿಗಳು ಶಕ್ತಿ ಕೊಟ್ಟರು. ಅವರ ದಾರಿಯಲ್ಲೇ ನಾನು ಸಾಗುತ್ತಿದ್ದೇನೆ. ಬಂಗಾರಪ್ಪ ಅವರ ಅಭಿಮಾನಿಗಳು ಶುಭ ಹಾರೈಸಿದ್ದು, ಅವರನ್ನು ನನ್ನೊಂದಿಗೆ ಬೆಂಗಳೂರಿಗೆ ವಿಮಾನದ ಮೂಲಕ ಕರೆದುಕೊಂಡು ಹೋಗುತ್ತಿದ್ದೇನೆ. ಸುಮಾರು 38 ಜನ ಅಭಿಮಾನಿಗಳು ವಿಮಾನಯಾನ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಎರಡು ಕಡೆ ನನ್ನ ಜನ್ಮದಿನ ಆಚರಣೆ ಕೈಗೊಂಡಿದ್ದಾರೆ. ಸೊರಬ ಮೂಲದವರು ಬೆಂಗಳೂರಿನಲ್ಲಿ ಊಟ ಇಟ್ಟು ಕೊಂಡಿದ್ದಾರೆ. ಅದಕ್ಕೆ ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನದ ನಿರೀಕ್ಷೆ:ಫೆ.7ರಂದು ರಾಜ್ಯದ ಬಜೆಟ್ ಮಂಡನೆ ಆಗಲಿದ್ದು, ಶಿಕ್ಷಣ ಇಲಾಖೆಗೆ ಹೊಸ ಯೋಜನೆಗಳಿಗೆ ಅನುದಾನ ದೊರಕುವ ವಿಶ್ವಾಸವಿದೆ. ಶಿವಮೊಗ್ಗ ಜಿಲ್ಲೆಯ ಹಲವು ನೀರಾವರಿ ಯೋಜನೆಗಳ ಕಾಮಗಾರಿ ಬಾಕಿ ಉಳಿದಿವೆ. ಅಧಿಕಾರ ಇದ್ದಾಗ ಕತ್ತೆಯ ತರ ದುಡಿದು ಜನರ ಸೇವೆ ಮಾಡಿದರೆ ಜನರು ನೆನಪಿಟ್ಟುಕೊಳ್ಳುತ್ತಾರೆ ಅದಕ್ಕೆ ನಾನಂತೂ ರೆಡಿ ಇದ್ದೇನೆ ಎಂದರು.ಶರಾವತಿ ಸಂತ್ರಸ್ತರ ಸಮಸ್ಯೆ ನ್ಯಾಯಾಲಯದಲ್ಲೂ ಉತ್ತಮ ರೀತಿಯಲ್ಲಿ ಬಗೆಹರಿಯುವ ವಿಶ್ವಾಸವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಶರಾವತಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.ಎಚ್.ಡಿ.ಕೋಟೆಯ ಮುಖ್ಯ ಶಿಕ್ಷಕನ ವಿಚಾರದಲ್ಲಿ ಹಿಂದೆ ಮುಂದೆ ನೋಡಲ್ಲ. ನಾನಂತೂ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಏನು ತಪ್ಪಾಗಿದೆ ಎಂದು ಪರಿಶೀಲನೆ ನಡೆಸಲಾಗುವುದು. ಯಾರೂ ಅವರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ತಪ್ಪಾದರೆ ಕಾನೂನು ಬದ್ಧವಾಗಿ ಅವರಿಗೇನು ಶಿಕ್ಷೆ ಆಗಬೇಕು ಆಗಿಯೇ ಆಗುತ್ತದೆ. ವಿಷಯ ತಿಳಿದ ತಕ್ಷಣ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಇನ್ನು ರಾಜ್ಯದಾದ್ಯಂತ ಹಕ್ಕಿ ಜ್ವರದ ಹಿನ್ನೆಲೆ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡೊ ಬೇಕೋ ಎಂದು ಚರ್ಚೆ ನಡೆಯುತ್ತಿದೆ. ಮೊಟ್ಟೆಗೂ, ಕೋಳಿಗೂ ಡಿಫರೆನ್ಸ್ ಇರುತ್ತದೆ. ಕಳೆದ ಬಾರಿ ಹಕ್ಕಿ ಜ್ವರ ಆದಾಗಲೆಲ್ಲ ಮೊಟ್ಟೆ ತಿಂದಿದ್ದೇವೆ. ಜ್ವರ ಬಂದಿರದ ಕೋಳಿಯನ್ನು ತಿಂದಿದ್ದೇವೆ. ಆರೋಗ್ಯ ಇಲಾಖೆ ಈ ಬಗ್ಗೆ ನಿಗಾ ಇಡಲಿದೆ. ಹಾಗೇನಾದರೂ ಹಕ್ಕಿ ಜ್ವರ ಕಾಣಿಸಿಕೊಂಡರೆ ನಾವು ಹುಷಾರಾಗಿರುತ್ತೇವೆ ಎಂದು ತಿಳಿಸಿದರು.
ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕಿದೆ:ಕಳೆದ ಬಾರಿ ಬರಗಾಲದ ಹಿನ್ನೆಲೆ ಕಡಿಮೆ ಬೆಳೆಯಲಾಗಿತ್ತು. ಇದೀಗ ಬೇಸಿಗೆಯಲ್ಲಿ ಮತ್ತೊಂದು ಬೆಳೆ ಬೆಳೆಯಲಾಗುತ್ತಿದೆ. ಆದರೆ, ಈ ಹೊತ್ತಿನಲ್ಲೇ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಕೆಲವೆಡೆ ಗ್ರಿಡ್ ಪರಿವರ್ತನೆ ಕೆಲಸ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಒತ್ತಡ ಕಡಿಮೆ ಮಾಡುವ ಪ್ರಯತ್ನ ಆಗಿದೆ. ಶರಾವತಿಯಿಂದ ವಿದ್ಯುತ್ ಉತ್ಪಾದನೆಗೆ ಪರಿಸರವಾದಿಗಳ ವಿರೋಧವಿದೆ. ಪರಿಸರವಾದಿಗಳಿಗೆ ಮನವರಿಕೆ ಮಾಡಿ ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕಿದೆ. ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ಮಾಡಿದರೆ ಪರಿಸರಕ್ಕೆ ಹೆಚ್ಚಿನ ಹಾನಿ ಆಗುತ್ತದೆ ಎಂದರು.
ಕರ್ನಾಟಕ ಬಂದ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೋರಾಟಗಾರರು ಅವರ ವ್ಯಾಪ್ತಿಯಲ್ಲಿ ಹೋರಾಟ ನಡೆಸುತ್ತಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕೆಲವರು ಪುಂಡಾಟಿಕೆ ನಡೆಸಿ ಶಾಂತಿ ಕದಡುವ ಕೆಲಸವನ್ನು ಆವಾಗಾವಾಗ ಮಾಡುತ್ತಾರೆ. ಅದಕ್ಕೆ ಏನು ನಾವು ಹೆದರುವ ಪ್ರಶ್ನೆ ಇಲ್ಲ ಎಂದರು.ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಬಂದ್ ಹಿನ್ನೆಲೆ ಡಿಸಿ, ಸಿಇಒ, ಎಸ್ಪಿ ಎಲ್ಲರಿಗೂ ಪರೀಕ್ಷಾ ಸಂದರ್ಭದಲ್ಲಿ ಸೂಕ್ತ ಭದ್ರತೆಯನ್ನು ರಕ್ಷಣೆಯನ್ನು ನೀಡಲು ತಿಳಿಸಿದ್ದೇವೆ. ಪರೀಕ್ಷೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೋರಾಟಗಾರರು ಮನವಿ ಮಾಡುತ್ತೇನೆ ಎಂದರು.
ಡಿಕೆಶಿ, ರಾಜಣ್ಣ ಹೇಳಿಕೆ ಬಗ್ಗೆ ಚರ್ಚೆ ಮಾಡಲ್ಲಡಿ.ಕೆ.ಶಿವಕುಮಾರ್, ರಾಜಣ್ಣ ಮೊದಲಾದವರ ಹೇಳಿಕೆಗಳ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ. ಹೀಗಾಗಿ ಪಕ್ಷದ ಆಂತರಿಕ ವಿಚಾರದಲ್ಲಿ ನಾನು ಬಾಯಿ ಮುಚ್ಚಿಕೊಂಡು ಇರುತ್ತೇನೆ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿವಿಧ ಸೇವಾ ಕಾರ್ಯಗಳ ಮೂಲಕ
ಮಧು ಬಂಗಾರಪ್ಪರ ಹುಟ್ಟುಹಬ್ಬ ಆಚರಣೆ
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು, ಕಾರ್ಯಕರ್ತರು ಸೇರಿ ವಿವಿಧ ಸೇವಾ ಕಾರ್ಯಗಳ ಮೂಲಕ ನಗರದಲ್ಲಿ ಆಚರಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ನಗರದ ಪ್ರವಾಸಿ (ಸರ್ಕಿಟ್ ಹೌಸ್) ಮಂದಿರದಲ್ಲಿ 150ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಸಚಿವರಿಂದ ಸೀರೆ ವಿತರಿಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎನ್ಎಸ್ ಯುಐನಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಕಾಂಗ್ರೆಸ್ ಮುಖಂಡ ವಿನಯ್ ತಾನ್ಲೆ ನೇತೃತ್ವದಲ್ಲಿ ಅಬ್ಬಲಗೆರೆಯ ಜ್ಞಾನೇಶ್ವರಿ ಗೋ ಶಾಲೆಗೆ ಮೇವು ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ, ಅಭಿಮಾನಿಗಳು, ಕಾರ್ಯಕರ್ತರು ಸೇರಿ ಹುಟ್ಟುಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ. ತಾಲೂಕಿನ ಕುಬಟೂರು ಹಾಗೂ ಸುತ್ತಲಿನ ಹಳ್ಳಿಗಳಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಒಡನಾಡಿಗಳಾಗಿದ್ದ 38 ಜನರನ್ನು ಶಿವಮೊಗ್ಗದಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ. ಇದೊಂದು ಕೃತಜ್ಞತಾಪೂರ್ವಕ ಕಾರ್ಯಕ್ರಮ ಎಂದರು.
ಬೆಂಗಳೂರಿನಲ್ಲಿ ಬಂಗಾರಪ್ಪ ಅವರ ಅಭಿಮಾನಿಗಳು ಇಟ್ಟುಕೊಂಡಿರುವ ಜನ್ಮದಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಂತರ ಶಿವಮೊಗ್ಗಕ್ಕೆ ಮರಳಲಿದ್ದಾರೆ. ಇದೊಂದು ರೀತಿಯಲ್ಲಿ ಹಬ್ಬದ ವಾತಾವರಣ ಎಂದರು.
ಬಂಗಾರಪ್ಪ ಅವರ ತಂದೆಯ ಒಡನಾಡಿಗಳ ಜತೆ ಮಧು ಬಂಗಾರಪ್ಪ ಅವರು ಸಹ ಪ್ರಯಾಣ ಮಾಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಭೋವಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರವಿಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ, ಜಿ.ಡಿ.ಮಂಜುನಾಥ, ದೇವೇಂದ್ರಪ್ಪ, ಸುನಿಲ್, ಶಿವಾನಂದ, ಭಾಸ್ಕರ್, ಪಾಲಾಕ್ಷಿ, ಮಂಜುನಾಥ್ ನಾವುಲೆ, ಗಿರೀಶ್ ಸೇರಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.