ಸಾರಾಂಶ
ಶಿಕ್ಷಕರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಮತ್ತು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಿಎಂ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿದೆ. ಸಮಿತಿ ವರದಿಯನ್ನು ನೀಡಬೇಕಿದೆ.
ಮಂಡ್ಯ : ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಗಡುವು ನೀಡುವುದು ಬೇಡ. ಎಲ್ಲಾ ಸಮಸ್ಯೆಗಳಿಗೆ ಒಂದೇ ಬಾರಿಗೆ ಪರಿಹಾರ ಸೂಚಿಸುವುದಕ್ಕೂ ಸಾಧ್ಯವಿಲ್ಲ. ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ನಗರದ ಮಂಡ್ಯ ವಿಶ್ವ ವಿದ್ಯಾಲಯದ ಆವರಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಮತ್ತು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಿಎಂ ನೇತೃತ್ವದಲ್ಲಿ ಸಮಿತಿಯನ್ನೂ ರಚಿಸಲಾಗಿದೆ. ಸಮಿತಿ ವರದಿಯನ್ನು ನೀಡಬೇಕಿದೆ. ಬೇಡಿಕೆ ಈಡೇರಿಸುವ ಸಮಯದಲ್ಲಿ ಮುಂದೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗಬಾರದು. ಅದಕ್ಕಾಗಿ ಕಾನೂನು ಸಚಿವರೊಂದಿಗೂ ಚರ್ಚಿಸಬೇಕು. ಶಿಕ್ಷಣ ತಜ್ಞರು, ಇಲಾಖಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಂತರ ಅವುಗಳನ್ನು ಜಾರಿಗೆ ತರಬೇಕು. ಇದಕ್ಕೆಲ್ಲಾ ಸಮಯಾವಕಾಶ ಬೇಕು ಎಂದರು.
ಶಿಕ್ಷಕರಿಗೆ ಒಪಿಎಸ್ ಜಾರಿ ಕುರಿತು ಪ್ರಣಾಳಿಕೆಯಲ್ಲೇ ತಿಳಿಸಲಾಗಿತ್ತು. ಆ ಮಾತನ್ನು ಉಳಿಸಿಕೊಳ್ಳುತ್ತೇವೆ. ಏಳನೇ ವೇತನ ಆಯೋಗವನ್ನು ಜಾರಿಗೊಳಿಸಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಖಾಲಿ ಇರುವ ಶೇ.೮೦ರಷ್ಟು ಶಿಕ್ಷಕ ಹುದ್ದೆಗಳನ್ನು ಭರ್ತಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಸಿ ಅಂಡ್ ಆರ್ ಕಾಯಿದೆ ಬದಲಾವಣೆಯಾಗಬೇಕು, ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು ಎಂಬೆಲ್ಲಾ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೀರಿ. ಅವೆಲ್ಲವನ್ನೂ ಕಾನೂನು ವ್ಯಾಪ್ತಿಯೊಳಗೆ ಚರ್ಚಿಸಿ ಜಾರಿಗೊಳಿಸಬೇಕಿದೆ. ಕೆಲವೊಂದು ಬೇಡಿಕೆಗಳು ಕಾನೂನಿನ ಪರಿಮಿತಿಯೊಳಗಿವೆ. ಅದರ ಬಗ್ಗೆ ಕಾನೂನು ಸಚಿವರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರ ತನ್ನ ಅಧಿಕಾರವಧಿಯಲ್ಲಿ ಕೇವಲ ೩,೫೦೦ ಶಿಕ್ಷಕರನ್ನು ಮಾತ್ರ ನೇಮಿಸಿತ್ತು. ನಾವು ಎರಡು ವರ್ಷದಲ್ಲೇ ೧೩ ಸಾವಿರ ಶಿಕ್ಷಕರನ್ನು ನೇಮಿಸಿದ್ದೇವೆ. ಇನ್ನೂ ೧೫ ಸಾವಿರ ಶಿಕ್ಷಕರ ನೇಮಕಕ್ಕೆ ಸಿದ್ಧತೆ ನಡೆಸಿದ್ದೇವೆ. ಇದರಿಂದಾಗುವ ಹೊರೆಯನ್ನೂ ಸರ್ಕಾರವೇ ಭರಿಸಬೇಕಿರುವುದರಿಂದ ಎಲ್ಲ ಬೇಡಿಕೆಗಳನ್ನು ಒಮ್ಮೆಲೇ ಈಡೇರಿಸುವಂತೆ ಪಟ್ಟು ಹಿಡಿಯುವುದು ಸರಿಯಲ್ಲ ಎಂದರು.
ಶಿಕ್ಷಣ ಸಚಿವನಾಗಿ ಕೆಲಸ ಮಾಡುತ್ತಿರುವುದಕ್ಕೆ ತೃಪ್ತಿ ಇದೆ. ಜಾತಿ, ಧರ್ಮಕ್ಕೆಲ್ಲಾ ಒಂದು ಚೌಕಟ್ಟಿದೆ. ಆದರೆ, ಶಿಕ್ಷಣಕ್ಕೆ ಯಾವುದೇ ಚೌಕಟ್ಟಿಲ್ಲ. ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಮಾ.೩ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ನಿಮ್ಮೆಲ್ಲಾ ಬೇಡಿಕೆಗಳ ಕುರಿತಂತೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಪದಾಧಿಕಾರಿಗಳಾದ ಜಿ.ವೈ.ಮಂಜುನಾಥ್, ಮಾಲತೇಶ್, ಪ್ರಮೀಳಾ, ಚಿಕ್ಕೇಗೌಡ, ಸಿದ್ದರಾಮು, ರವಿಶಂಕರ್, ರುದ್ರೇಶ್, ನಾಗೇಶ್ ಇತರರಿದ್ದರು.