ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಿದ್ಧಿಪುರುಷ ಶ್ರೀವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪ್ರತಿವರ್ಷದ ಪದ್ಧತಿಯಂತೆ ಶ್ರೀಕ್ಷೇತ್ರ ಅಬ್ಬೆತುಮಕೂರು ಡಾ. ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಂಪರಾ ಪಾದಯಾತ್ರೆ ಆ.2 ರಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಮಠದ ವಕ್ತಾರರಾದ ಡಾ. ಸುಭಾಶ್ಚಂದ್ರ ಕೌಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆ.2ರಂದು ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ಅಲ್ಲಿ ಬಿ.ಎಂ. ಪಾಟೀಲ್ ಅವರಿಂದ ಪ್ರಸಾದ ವ್ಯವಸ್ಥೆ ಜರುಗುವುದು. ನಂತರ ಮಧ್ಯಾಹ್ನ 1 ಗಂಟೆಗೆ ಸಕಲ ಮಂಗಲ ವಾದ್ಯಗಳೊಂದಿಗೆ ಅಮೃತೇಶ್ವರ ಮಂದಿರದಿಂದ ಪೂಜ್ಯರ ದರ್ಶನ, ಪ್ರಸಾದ ಪಡೆದುಕೊಂಡು ವಿಶ್ವಾರಾಧ್ಯರ ಜನ್ಮಭೂಮಿ ಪಂಚಗೃಹ ತೋಪಕಟ್ಟಿ ಹಿರೇಮಠದಿಂದ ಭಕ್ತಗಣಪುರದ ಜನರ ಕಳಸ, ಕನ್ನಡಿಯೊಂದಿಗೆ ಪಾದಯಾತ್ರೆ ಆರಂಭಗೊಳ್ಳಲಿದೆ.
ಗ್ರಾಮದ ಚೆನ್ನಪ್ಪ ಸಾಹು ಬಿರಾದಾರ ಇವರ ಗುರು ಮಂಟಪದಲ್ಲಿ ಶ್ರೀಗಳಿಗೆ ಪಾದಪೂಜೆ ನಂತರ ಸಾಗುವ ಪಾದಯಾತ್ರೆ ಮಾರ್ಗಮಧ್ಯೆ ವಿವಿಧೆಡೆ ಭಕ್ತರಿಗೆ ಆಶೀರ್ವಚನ ನೀಡಿ, ಅಣಬಿ ಗ್ರಾಮವನ್ನು ತಲುಪುವದು.ಶ್ರೀವಿಶ್ವಾರಾಧ್ಯರ ಶಾಖಾಮಠದಲ್ಲಿ ಪ್ರಸಾದ, ಶಿರವಾಳ, ಹುರಸಗುಂಡಗಿ ಮೂಲಕ ಪಾದಯಾತ್ರೆ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪುವುದು. ಅಲ್ಲಿ ಶ್ರೀಗಳು ದೇವಿಗೆ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಆ.2 ರಂದು 2ನೇ ದಿನದ ಪಾದಯಾತ್ರೆ ಕನಗನಹಳ್ಳಿ ಮಾರ್ಗವಾಗಿ, ಊಳವಂಡಗೇರಾ, ಬನ್ನೆಟ್ಟಿ, ತಳಕ, ಹೆಡಗಿಮದ್ರಾಕ್ಕೆ ಶ್ರೀ ಶಾಂತಶಿವಯೋಗಿ ಮಠಕ್ಕೆ ತೆರಳಲಿದೆ.
ಹೆಡಗಿಮದ್ರಾ ಮಠದಲ್ಲಿ ರಾತ್ರಿಯಿಡೀ ಭಜನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.ಆ.2 ರಂದು ಭಾನುವಾರ ಹೆಡಗಿಮುದ್ರಾದಿಂದ 3ನೇ ದಿನದ ಪಾದಯಾತ್ರೆ ಠಾಣಗುಂದಿ ಮೂಲಕ ಸಂಜೆ ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯರ ಪಾದಗಟ್ಟೆ ತಲುಪಲಿದೆ. ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರುಗಳು, ರಾಜಕೀಯ ಮುಖಂಡರು, ಸಾಹಿತಿ, ಕಲಾವಿದರು ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ಶ್ರೀ ವಿಶ್ವಾರಾಧ್ಯರ ದೇವಸ್ಥಾನದ ವರೆಗೆ ವಿಶೇಷ ಮೆರವಣಿಗೆಯಲ್ಲಿ ಶ್ರೀಗಳನ್ನು ಕರೆದೊಯ್ಯುವರು. ಮಾಸಿಕ ಅಮಾವಾಸ್ಯೆಯ ಶಿವಾನುಭವಗೋಷ್ಠಿಯೊಂದಿಗೆ ಪಾದಯಾತ್ರೆ ಸಂಪನ್ನಗೊಳ್ಳುವುದು.