ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ಹುನಗುಂದ ಮತಕ್ಷೇತ್ರದ ಅಭಿವೃದ್ಧಿಗಾಗಿ ದಿ.ಎಸ್.ಆರ್.ಕಾಶಪ್ಪನವರ ಅವರು ಮಾಡಿದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳು ಶರೀರ ಅಳಿದರೂ, ಕೆಲಸ ಎಂದೆಂದಿಗೂ ಅಳಿಯಲಾರದು ಎಂಬಂತಿವೆ ಎಂದು ಉಜ್ಜೈನಿ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.ತಾಲೂಕಿನ ಹಾವರಗಿಯಲ್ಲಿ ಎಸ್.ಎಂ.ಎಸ್ ಪ್ರೌಢಶಾಲೆ ಆವರಣದಲ್ಲಿ ಬುಧವಾರ ದಿ.ಎಸ್.ಆರ್.ಕಾಶಪ್ಪನವರ ಸ್ಮಾರಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ.ಎಸ್.ಆರ್.ಕಾಶಪ್ಪನವರ 22ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ದಿ.ಎಸ್.ಆರ್.ಕಾಶಪ್ಪನವರ ತಮ್ಮ ಮತಕ್ಷೇತ್ರದಲ್ಲಿ ಜನರಿಗೆ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ನೀರಾವರಿ ಸೌಲಭ್ಯಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಸಂಕಲ್ಪ ಹೊಂದಿದ್ದರು. ಅಪರೂಪದ ವಿಶಾಲ ಹೃದಯದ ರಾಜಕಾರಣಿ ದಿ.ಎಸ್.ಆರ್.ಕಾಶಪ್ಪನವರು. ಕೃಷಿ ವ್ಯವಸ್ಥೆಗೆ ಆತಂಕ ಬಂದಾಗ ಮಹಾರಾಷ್ಟ್ರಕ್ಕೆ ಹೋಗಿ ನಿಯಮ ಮೀರಿ ಅಲ್ಲಿನ ಆಣೆಕಟ್ಟಿನ ಗೇಟ್ ಅನ್ನು ತೆಗೆದು ಇತಿಹಾಸದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
ಸಾಂವಿಧಾನಿಕ ಅಧಿಕಾರ ಯಾವುದೇ ವ್ಯಕ್ತಿ ಗುರುವಿನ ಪಾದದಡಿ ಇರಬೇಕು ಎಂಬ ತತ್ವವನ್ನು ಅಳವಡಿಸಿಕೊಂಡಿದ್ದರು. ಕೂಡಲ ಸಂಗಮದಲ್ಲಿ ಪಂಚಾಚಾರ್ಯರ ಸರ್ವಧರ್ಮ ಸಮ್ಮೇಳನ ನಡೆಸಲು ಉಂಟಾಗಿದ್ದ ಅಡ್ಡಿಗಳನ್ನು ಮೆಟ್ಟಿ ನಿಂತಿದ್ದರು. ಲಕ್ಷ ಜನಸಂಖ್ಯೆ ಸೇರಿಸಿ ಕೂಡಲಸಂಗಮದ ಧಾರ್ಮಿಕ ಚರಿತ್ರೆಯಲ್ಲಿ ಉಳಿಯುವಂತೆ ಸಮ್ಮೇಳನ ನಡೆಸಿದ್ದರು. ಗುರುಪೀಠ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಗೌರವ ತಂದು ಕೊಟ್ಟ ವ್ಯಕ್ತಿತ್ವ ದಿ.ಎಸ್.ಆರ್.ಕಾಶಪ್ಪನವರದ್ದು ಎಂದು ಬಣ್ಣಿಸಿದರು.ಸಾನ್ನಿಧ್ಯ ವಹಿಸಿದ್ದ ಕಾಶಿ ನೂತನ ಪೀಠಾಧೀಶ್ವರ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಲಿಂ.ಎಸ್.ಆರ್.ಕಾಶಪ್ಪನವರು ಲಿಂಗೈಕ್ಯಗಾಗಿ 22 ವರ್ಷಗಳಾದರೂ, ಅವರ ಕೆಲಸಗಳನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. ಅವರು ಜನರ ಮನಸಿನಲ್ಲಿ ಅಜರಾಮರರಾಗಿದ್ದಾರೆ. ಎಲ್ಲ ಧರ್ಮದವರಿಗೂ ಸಮನಾಗಿ ಅಧಿಕಾರ, ನ್ಯಾಯ ಸಮನಾಗಿ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ತಂದೆ ದಿ.ಎಸ್.ಆರ್.ಕಾಶಪ್ಪನವರ ಮತಕ್ಷೇತ್ರದಲ್ಲಿ ಬಡಜನರಿಗೆ ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಆರಂಭಿಸಿದ್ದಾರೆ. ಕೂಡಲಸಂಗಮದಲ್ಲಿ ಡಿಟಿಡಿಸಿ ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿ ಮತ್ತು 14 ಸಾವಿರ ಎಕರೆ ಪ್ರದೇಶಗಳಿಗೆ ನೀರಾವರಿ ಯೋಜನೆಯನ್ನು ತಂದು ಹಸಿರು ಕ್ರಾಂತಿಯನ್ನು ಮಾಡಿದ್ದಾರೆ ಎಂದು ಸ್ಮರಿಸಿದರು.ಅವರ ಕನಸಿನ ಕೂಸು ಎಸ್.ಆರ್.ಕೆ ಶುಗರ್ ಆರಂಭಿಸಿ ತಾಲೂಕಿನ ಯುವಕರಿಗೆ ಉದ್ಯೋಗ ನೀಡಲಾಗುವುದು. ಕಳೆದ 22 ವರ್ಷದಿಂದ ದಿ.ಎಸ್.ಆರ್.ಕಾಶಪ್ಪನವರ ಪ್ರತಿಷ್ಠಾನದಿಂದ ಅನೇಕ ಸಾಮಾಜಿಕ, ಧಾರ್ಮಿಕ, ಆರೋಗ್ಯ, ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಪಂಚಪೀಠಾಧೀಶ್ವರರ ಆಶೀರ್ವಾದ ನಮ್ಮ ಕುಟುಂಬದ ಮೇಲಿದೆ. ಅವರ ಆಶೀರ್ವಾದದಿಂದ ನಾನು ಮತ್ತೆ ಶಾಸಕನಾಗಿದ್ದೇನೆ ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಂಗಾಧರ ದೊಡಮನಿ ಮಾತನಾಡಿದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯ, ಬಿಲ್ ಕೆರೂರಿನ ಸಿದ್ದಲಿಂಗ ಸ್ವಾಮಿಗಳು, ನಂದವಾಡಗಿ ಅಭಿನವ ಚನ್ನಬಸವ ಸ್ವಾಮಿಗಳು, ಕೂಡಲಸಂಗಮದ ಅಭಿನವ ಜಾತಮುನಿಗಳು, ಕೊಲ್ಹಾರದ ಕಲ್ಲಿನಾಥ ಸ್ವಾಮಿಗಳು, ದಿಂಡವಾರ ಕುಮಾರಲಿಂಗ ಶಿವಾಚಾರ್ಯ ಸೇರಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು.ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ನಗರಸಭೆ ಮಾಜಿ ಅಧ್ಯಕ್ಷ ದೇವಾನಂದ ಕಾಶಪ್ಪನವರ, ವಕೀಲ ಸಿ.ವಿ.ಕೋಟಿ, ಕಾರ್ಯದರ್ಶಿ ಬಸವರಾಜ ಶಿರೂರ ಉಪಸ್ಥಿತರಿದ್ದರು.
------------------------------------------ಬಾಕ್ಸ್
9ನೇ ತರಗತಿ ಪಠ್ಯಕ್ರಮ ಬದಲು ಸರಿಯಲ್ಲ: ಉಜ್ಜೈನಿ ಶ್ರೀಪ್ರಸಕ್ತ ವರ್ಷದಲ್ಲಿ ರಾಜ್ಯದ ಪಠ್ಯಕ್ರಮವನ್ನು 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಬದಲಾವಣೆ ಮಾಡಿರುವುದು ಸರಿಯಲ್ಲ. ಈ ಹಿಂದೆ ಇದ್ದ ಪಠ್ಯಕ್ರಮವನ್ನು ಸರ್ಕಾರ ಮುಂದುವರಿಸಬೇಕು. ಕೆಲವರ ಮಾತನ್ನು ಕೇಳಿಕೊಂಡು ಪಠ್ಯ ಪರಿಷ್ಕರಣೆ ಮಾಡಿರುವುದು ಸರಿಯಲ್ಲ. ಶಾಸಕ ವಿಜಯಾನಂದ ಕಾಶಪ್ಪನವರ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಇದ್ದ ಮಾದರಿಯಲ್ಲಿಯೇ ಮುಂದುವರಿಸಬೇಕು ಎಂದು ಉಜ್ಜೈನಿಯ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಒತ್ತಾಯಿಸಿದರು.
ಇಂದು ವೀರಶೈವ- ಲಿಂಗಾಯತರ ಭಿನ್ನಾಭಿಪ್ರಾಯದಿಂದ ಸಮಾಜದ ಜನರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ವಿರಶೈವ- ಲಿಂಗಾಯತರು ಒಗ್ಗೂಡಿದಾಗ ಸೂಕ್ತ ಸ್ಥಾನಮಾನಗಳು ಸಿಗುತ್ತವೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಬಸವಣ್ಣನನ್ನು ಘೋಷಿಸಿರುವುದು ಅಭಿನಂದನಾರ್ಹ ಎಂದರು.------------------ಕೋಟ್
ಇಂದಿನ ದಿನಗಳಲ್ಲಿ ಕೆಲವು ರಾಜಕಾರಣಿಗಳು ಕುರ್ಚಿ ಉಳಿಸಿಕೊಳ್ಳಲು ಅನೇಕ ಕಷ್ಟ ಪಡುತ್ತಾರೆ. ದಿ.ಎಸ್.ಆರ್.ಕಾಶಪ್ಪನವರ ಯಾವ ಕುರ್ಚಿಯನ್ನು ಲೆಕ್ಕಿಸದೇ ಧರ್ಮವನ್ನೇ ತನ್ನ ಉಸಿರಾಗಿಸಿಕೊಂಡು ಜನರ ಮನಸ್ಸಿನಲ್ಲಿ ರಾಜನ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.- ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ, ಕಾಶಿ ಪೀಠ