ಉದ್ಯಮಶೀಲ ವಿಭಿನ್ನ ಆಲೋಚನೆಗಳಿಂದ ಹೊಸ ಅವಕಾಶ

| Published : Oct 26 2024, 12:58 AM IST

ಸಾರಾಂಶ

ಉದ್ಯಮಶೀಲ ವಿಭಿನ್ನ ಆಲೋಚನೆಗಳು ಹೊಸ ಹೊಸ ಅವಕಾಶಗಳನ್ನು ನಿರ್ಮಿಸಬಲ್ಲವು.

ಕನ್ನಡಪ್ರಭ ವಾರ್ತೆ ಮೈಸೂರುಉದ್ಯಮಶೀಲತೆಯು ಮತ್ತಷ್ಟು ಸ್ವಾವಲಂಬಿ ಔದ್ಯೋಗಿಕ ಅವಕಾಶ ಸೃಷ್ಟಿಸಿಕೊಡುವಲ್ಲಿ ನೆರವಾಗುತ್ತಿದೆ. ಇಂದಿನ ಆಧುನಿಕ ಜಗತ್ತಿನ ವಿಫುಲ ಅವಕಾಶ ಗಮನಿಸಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸದುಪಯೋಗವಾಗುವಂತೆ ಬಳಸಿಕೊಂಡು ಉದ್ಯಮಶೀಲತೆ ಬೆಳೆಸಿಕೊಂಡು ಸಾಧಕರಾಗಬೇಕು ಎಂದು ಖ್ಯಾತ ಯುವ ಉದ್ಯಮಿ, ಸೈನಿಫಿಯಾನ್, ಬ್ಲಿಂಕ್ ಲ್ಯಾಬ್ ಎಲ್.ಎಲ್.ಸಿ ಯುಎಸ್ಎ ಕಂಪನಿಗಳ ಸಹ ಸಂಸ್ಥಾಪಕ ಶ್ರೀನಿಧಿ ಹೇಳಿದರು.ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಐಕ್ಯುಎಸಿ ಸ್ಟಾರ್ಟ್ ಅಪ್ ಸೆಲ್ ಸಹಯೋಗದಲ್ಲಿ ಆಯೋಜಿಸಿದ್ದ ವಿನೂತನ ಆಲೋಚನೆಯ ಭಿತ್ತಿ ಬರಹ ಪ್ರದದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉದ್ಯಮಶೀಲ ವಿಭಿನ್ನ ಆಲೋಚನೆಗಳು ಹೊಸ ಹೊಸ ಅವಕಾಶಗಳನ್ನು ನಿರ್ಮಿಸಬಲ್ಲವು. ಜೊತೆಗೆ ದೇಶದ ಸದೃಢ ಉದ್ಯಮಶೀಲ ಬೆಳವಣಿಗೆಗೆ ನೆರವಾಗಬಲ್ಲದು. ಶಿಕ್ಷಣವು ವಿದ್ಯಾರ್ಥಿಗಳನ್ನು ಭವಿಷ್ಯದ ವಿಭಿನ್ನ ಅವಕಾಶಗಳಿಗೆ ತೆರೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.ಇದರಿಂದ ವಿದ್ಯಾರ್ಥಿಗಳು ತರಗತಿಯ ಕಲಿಕೆಯನ್ನು ತಮ್ಮ ಕ್ರಿಯಾಶೀಲ ಚಿಂತನೆಗಳೊಂದಿಗೆ ಪ್ರಯೋಗಾತ್ಮಕವಾಗಿ ರೂಢಿಸಿಕೊಳ್ಳಲು ಅನುಕೂಲವಾಗುತ್ತಿದೆ. ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವಾಗುತ್ತಿದೆ. ಇದು ಎಲಾನ್ ಮಸ್ಕ್, ಬಿಲ್ ಗೇಟ್ಸ್ರಂತಹ ಉದ್ಯಮಿಗಳು, ಇನ್ಫೊಸಿಸ್, ವಿಪ್ರೋ, ಆಪಲ್, ಮೈಕ್ರೋಸಾಫ್ಟ್, ಫಿಜ್ಜಾ ಹಟ್, ಓಲಾದಂತಹ ಕಂಪನಿಗಳು ನಿಮಗೆ ಮಾದರಿಯಾಗಬೇಕು ಎಂದರು.ಕಾಲೇಜುಗಳಲ್ಲಿ ಆಯೋಜನೆಗೊಳ್ಳುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಉದ್ಯಮಶೀಲತೆಯನ್ನು ಪ್ರೇರೇಪಿಸಿ ಪ್ರೋತ್ಸಾಹಿಸಲು ನೆರವಾಗುತ್ತವೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಉದ್ಯಮ ಶೀಲತೆಯು ವಿದ್ಯಾರ್ಥಿಗಳನ್ನು ಸ್ವಾವಲಂಬಿ ಬದುಕಿನ ಕಡೆಗೆ ಪ್ರೋತ್ಸಾಹಿಸಿ ಅವರ ಹೊಸ ಹೊಸ ಆಲೋಚನೆಗಳನ್ನು ಪ್ರಯೋಗಾತ್ಮಕವಾಗಿ ಪ್ರಸ್ತುತಪಡಿಸಲು ನೆರವಾಗಿದೆ. ಇದರಿಂದ ಆಧುನಿಕ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಹೊಸತರ ಹುಡುಕಾಟಗಳು ಆರಂಭವಾಗಿ ಹೊಸ ಉದ್ಯಮಗಳ ಸ್ಥಾಪನೆಗೆ ನೆರವಾಗಿದೆ ಎಂದರು.ಸರ್ಕಾರವು ನವ ಉದ್ಯಮಗಳ ಸ್ಥಾಪನೆಗೆ ಕೈಗೊಂಡಿರುವ ಕ್ರಮಗಳು, ಸೃಷ್ಟಿಸಿರುವ ಅವಕಾಶಗಳು, ಸಾಲ ಸೌಲಭ್ಯಗಳು ಹೇರಳವಾಗಿವೆ. ಇವುಗಳನ್ನು ಬಳಸಿಕೊಂಡು ತಮ್ಮದೇ ಆದ ಸ್ವ ಉದ್ಯಮ ಸ್ಥಾಪಿಸಿ ನೂರಾರು ಉದ್ಯೋಗಗಳನ್ನು ಸೃಷ್ಟಿಸಬಹುದು. ತಂತ್ರಜ್ಞಾನದ ಬಳಕೆಯ ಜೊತೆಗೆ ಮಾರುಕಟ್ಟೆಯ ಕೌಶಲಗಳು ಕೂಡ ಉದ್ಯಮದ ಅಭಿವೃದ್ಧಿಗೆ ಅತ್ಯಂತ ಅವಶ್ಯಕ ಎಂದರು.ಸ್ಟಾರ್ಟ್ ಅಪ್ ಸೆಲ್ ನ ಭಿತ್ತಿ ಬರಹ ಪ್ರದರ್ಶನ ಕಾರ್ಯಕ್ರಮದಲ್ಲಿ ದ್ವಿತೀಯ ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮೋನಿಷಾ ಅವರು ಪ್ರಥಮ ಹಾಗೂ ದ್ವಿತೀಯ ವರ್ಷದ ಸ್ನಾತಕೋತ್ತರ ಬಯೋಟೆಕ್ ವಿಭಾಗದ ಕೆ.ಬಿ. ಕೀರ್ತನ ಮತ್ತು ಎನ್.ಪಿ. ಯೋಗಿತಾ ದ್ವಿತೀಯ ಸ್ಥಾನ ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾಾರ್ಥಿಗಳಿಗೂ ಪ್ರಮಾಣಪತ್ರ ವಿತರಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭು ಸ್ವಾಗತಿಸಿದರು. ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ. ಪ್ರಭುಸ್ವಾಮಿ ಬಹುಮಾನ ವಿತರಿಸಿದರು. ಅದಿತಿ ಹೆಗಡೆ ಪ್ರಾರ್ಥಿಸಿದರು. ಅಧ್ಯಾಪಕರಾದ ಡಾ. ಸಿಂಧು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸ್ಟಾರ್ಟ್ ಅಪ್ ಸೆಲ್ ನ ಸದಸ್ಯ ಡಾ. ವಿಜಯೇಂದ್ರ ವಂದಿಸಿದರು. ಡಾ.ಡಿ.ಬಿ. ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು.ಐಕ್ಯುಎಸಿ ಸಂಯೋಜಕ ಡಾ.ಎನ್. ರಾಜೇಂದ್ರಪ್ರಸಾದ್, ಸ್ಟಾರ್ಟ್ ಅಪ್ ಸೆಲ್ನ ಸಂಯೋಜಕ ಡಾ. ಮಹದೇವಸ್ವಾಮಿ ಕಾರ್ಯಕ್ರಮದಲ್ಲಿ ಇದ್ದರು.