ಧಾರವಾಡ:ಪ್ರತಿಯೊಬ್ಬರ ಶೈಕ್ಷಣಿಕ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಅಂತೆಯೇ, ಪ್ರಸಕ್ತ ವರ್ಷದ ಈ ಪರೀಕ್ಷೆಗೆ ಕ್ಷಣಗಣನೆ ನಡೆದಿದೆ. ಮಾ. 18ರಿಂದ ಆರಂಭವಾಗಿ ಏ. 2ಕ್ಕೆ ಈ ಪರೀಕ್ಷೆ ಮುಗಿಯಲಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆಯು ಅಂತಿಮ ತಯಾರಿ ಪೂರ್ಣಗೊಳಿಸಿದೆ.ಈ ಬಾರಿಯ ಪರೀಕ್ಷೆಗೆ ಒಟ್ಟು 29,568 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, ಜಿಲ್ಲೆಯ 105 ಕೇಂದ್ರಗಳಲ್ಲಿ ಪರೀಕ್ಷಾ ಮಂಡಳಿಯು ಪರೀಕ್ಷೆ ನಡೆಸುತ್ತಿದೆ. ಸುಸೂತ್ರವಾಗಿ ಪರೀಕ್ಷೆ ನಡೆಸಲು 105 ಮುಖ್ಯ ಅಧೀಕ್ಷಕರು, 46 ಮಾರ್ಗಾಧಿಕಾರಿಗಳು, 105 ಪ್ರಶ್ನೆ ಪತ್ರಿಕೆ ಪಾಲಕರು, 105 ಜಾಗೃತ ಅಧಿಕಾರಿಗಳು, 105 ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು ಹಾಗೂ 1450 ಕೊಠಡಿ ಮೇಲ್ವಿಚಾರಕರು ಹಾಗೂ ಹೆಚ್ಚುವರಿ ಕೊಠಡಿ ಮೇಲ್ವಿಚಾರಕನ್ನು ನೇಮಿಸಲಾಗಿದೆ.
ವ್ಯವಸ್ಥಿತವಾಗಿ, ಶಾಂತ ರೀತಿಯಿಂದ ಪರೀಕ್ಷೆ ನಡೆಸಲು ಇಲಾಖೆಯು ಇನ್ನೂ ಕೆಲಸ ಕ್ರಮಕೈಗೊಂಡಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ 200 ಮೀಟರ್ ಸುತ್ತಲಿನ ಝೇರಾಕ್ಸ್ ಅಂಗಡಿ ಮುಚ್ಚಿಸಲಾಗುತ್ತದೆ. ಜತೆಗೆ ಪ್ರಮುಖ ಕೇಂದ್ರಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಸಹ ಮಾಡಲಾಗುತ್ತಿದೆ. ಪ್ರತಿಯೊಂದು ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಿ ನಿರ್ವಹಿಸಲಾಗುತ್ತಿದೆ.ಒಂದಂಕಿ ಫಲಿತಾಂಶಕ್ಕೆ ಪ್ರಯತ್ನ:ವಿದ್ಯಾಕಾಶಿ ಹೆಸರಿನ ಧಾರವಾಡ ಜಿಲ್ಲೆಯ ಈ ಹಿಂದಿನ ಪರೀಕ್ಷಾ ಫಲಿತಾಂಶ ಗಮನಿಸಿದರೆ, ಅಷ್ಟೊಂದು ಸಮಾಧಾನಕರವಿಲ್ಲ. ರಾಜ್ಯದ ಪೈಕಿ 20ಕ್ಕಿಂತ ಮೇಲಿನ ಸ್ಥಾನದಲ್ಲಿರುವ ಜಿಲ್ಲೆಯನ್ನು ಈ ಬಾರಿ ಒಂದಂಕಿ ಸ್ಥಾನಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಹತ್ತು ಹಲವು ಪ್ರಯತ್ನಗಳನ್ನು ನಡೆಸಿದ್ದು, ಇದೀಗ ಈ ಪ್ರಯತ್ನಗಳಿಗೆ ಫಲ ಸಿಗಬೇಕಿದೆ ಅಷ್ಟೇ.ಪ್ರತಿ ಶಾಲೆಯ ಫಲಿತಾಂಶ ಸುಧಾರಣೆಗೆ ಈಗಾಗಲೇ ಮೂರು ಸರಣಿ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳ ವಿಶ್ಲೇಷಣೆ ಮಾಡಲಾಗಿದೆ. ಶೇ.85ಕ್ಕಿಂತ ಕಡಿಮೆ ಫಲಿತಾಂಶದ ಶಾಲೆಗಳಿಗೆ ಜಿಲ್ಲಾ, ತಾಲೂಕು ಅಧಿಕಾರಿಗಳನ್ನು ಮೇಲುಸ್ತುವಾರಿ ಮಾಡಿ ಶೇ. 100ರಷ್ಟು ಫಲಿತಾಂಶ ತೆಗೆಯುವಲ್ಲಿ ಕ್ರಮಗೈಗೊಳ್ಳಲಾಗಿದೆ. ಮಂಡಳಿ ಬಿಡುಗಡೆ ಮಾಡಿದ ಮಾದರಿ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ನೀಲನಕ್ಷೆ ಆಧರಿಸಿ ಜಿಲ್ಲೆಯ ಎಲ್ಲ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಿದ್ದು, ಮಿಶನ್ 40 ಪ್ಲಸ್ (ಪ್ರತಿಯೊಬ್ಬರು 40 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಪಡೆಯುವುದು) ಗುರಿ ಹೊಂದಲಾಗಿದೆ. 3ನೇ ಸರಣಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಜಿಲ್ಲೆಯು ಒಂಭತ್ತು ಸ್ಥಾನ ಪಡೆದಿದ್ದು, ಅದೇ ರೀತಿ ಅಂತಿಮ ಪರೀಕ್ಷೆಯಲ್ಲೂ ಒಂದಂಕಿ ಸ್ಥಾನ ಪಡೆಯುವ ಭರವಸೆ ಇಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಹಾಗೂ ಸಂಯೋಜನಾಧಿಕಾರಿ ಎಸ್.ಎಂ. ಹುಡೇದಮನಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.