ಎಸ್‌ಎಸ್‌ಎಲ್‌ಸಿ: ಅವಿಭಜಿತ ಪುತ್ತೂರು ತಾಲೂಕಿನ ೪೨ ವಿದ್ಯಾರ್ಥಿಗಳು ಗೈರು

| Published : Mar 26 2024, 01:16 AM IST

ಎಸ್‌ಎಸ್‌ಎಲ್‌ಸಿ: ಅವಿಭಜಿತ ಪುತ್ತೂರು ತಾಲೂಕಿನ ೪೨ ವಿದ್ಯಾರ್ಥಿಗಳು ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು ೪೨ ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಉಭಯ ತಾಲೂಕುಗಳಲ್ಲಿ ಒಟ್ಟು ೪೭೩೨ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಈ ಪೈಕಿ ಒಟ್ಟು ೪೬೯೦ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಶೇ.೯೯.೧೧ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಎಸ್‌ಎಸ್‌ಎಲ್‌ಸಿ ಪ್ರಥಮ ದಿನದ ಪರೀಕ್ಷೆಗೆ ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಒಟ್ಟು ೪೨ ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಉಭಯ ತಾಲೂಕುಗಳಲ್ಲಿ ಒಟ್ಟು ೪೭೩೨ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ಈ ಪೈಕಿ ಒಟ್ಟು ೪೬೯೦ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಶೇ.೯೯.೧೧ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದಾರೆ. ಪ್ರಥಮ ದಿನವಾದ ಮಾ.೨೫ರಂದು ಪ್ರಥಮ ಭಾಷಾ ಪರೀಕ್ಷೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆದಿದೆ.

ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ತೆರೆಯಲಾಗಿರುವ ೧೩ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಈ ಪೈಕಿ ಕೊಂಬೆಟ್ಟು ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ-೩, ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆ-೧, ಉಪ್ಪಿನಂಗಡಿ ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗ-೫, ಸಂತ ವಿಕ್ಟರಣ ಬಾಲಿಕ ಪ್ರೌಢಶಾಲೆ-೧, ಕಡಬ ಸರಕಾರಿ ಪ್ರೌಢಶಾಲೆ-೩, ನೆಲ್ಯಾಡಿ ಸೈಂಟ್ ಜಾರ್ಜ್ ಪ್ರೌಢಶಾಲೆ-೧, ರಾಮಕುಂಜದ ಶ್ರೀರಾಮಕುಂಜೇಶ್ವರ ಪ್ರೌಢಶಾಲೆ-೨, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ-೬, ಸವಣೂರು ವಿದ್ಯಾರಶ್ಮೀ ಪ್ರೌಢಶಾಲೆ-೬, ಈಶ್ವರಮಂಗಲ ಗಜಾನನ ಪ್ರೌಢಶಾಲೆ-೭ ಹಾಗೂ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪರೀಕ್ಷಾ ಕೇಂದ್ರದಲ್ಲಿ ೬ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಗೈರು ಹಾಜರಾಗಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ೨೮ ಮಂದಿ ಹೊಸದಾಗಿ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ೧೪ ಮಂದಿ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ.

ಪುತ್ತೂರಿನ ೨ ಮತಗಟ್ಟೆ ಬದಲಾವಣೆಗೆ ಚುನಾವಣಾ ಆಯೋಗ ಮಂಜೂರಾತಿ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ೨೦೬-ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿನ ೨ ಮತಗಟ್ಟೆಗಳ ಬದಲಾವಣೆಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಈ ಮನವಿಗೆ ಚುನಾವಣಾ ಆಯೋಗ ಮಂಜೂರಾತಿ ನೀಡಿದೆ. ಈ ನಿಟ್ಟಿನಲ್ಲಿ ಹಾರಾಡಿ ಸ.ಹಿ.ಪ್ರಾ. ಶಾಲೆಯ ೧೨೭ ಹಾಗೂ ೧೨೮ ಮತಗಟ್ಟೆಯನ್ನು ಅಲ್ಲಿಯ ವ್ಯವಸ್ಥೆಯೊಳಗೇ ಬದಲಾವಣೆ ಮಾಡಲಾಗುತ್ತದೆ ಎಂದು ಸಹಾಯಕ ಚುನಾವಣಾಧಿಕಾರಿ, ಪುತ್ತೂರು ಉಪವಿಭಾಗಾಧಿಕಾರಿ ಜುಬಿನ್ ಮಹಾಪಾತ್ರ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮತಗಟ್ಟೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಈ ಬದಲಾವಣೆಗೆ ವಿನಂತಿ ಮಾಡಲಾಗಿತ್ತು ಎಂದು ತಿಳಿಸಿದರು.ಪುತ್ತೂರು ವಿಧಾನಸೌಧದ ೨೨೧ ಮತಗಟ್ಟೆಗಳಲ್ಲಿ ಹಾಲಿ ೨,೧೪,೪೦೪ ಮತದಾರರಿದ್ದಾರೆ. ಮಾ.೨೫ ರ ತನಕ ಹೊಸ ಮತದಾರರಿಗೆ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿತ್ತು. ಏ.೪ ರ ಬಳಿಕ ಅಂತಿಮ ಪಟ್ಟಿ ಬಿಡುಗಡೆಗೊಳ್ಳಲಿದೆ ಎಂದು ಅವರು ವಿವರಿಸಿದರು.

ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಯಂತ್ರಗಳು ಈಗಾಗಲೇ ಬಂದಿದ್ದು, ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಾಜಕೀಯ ಪಕ್ಷದವರ, ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಸೀಲ್ ಮಾಡಿ ಭದ್ರಗೊಳಿಸಲಾಗಿದೆ. ಅಂಚೆ ಮತದಾನ ಹಾಗೂ ೮೫ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಮತದಾನ ಹೆಚ್ಚಳಗೊಳಿಸುವುದಕ್ಕೆ ಸಂಬಂಧಿಸಿ ಸ್ವೀಪ್ ತಂಡ ಕಾರ್ಯನಿರ್ವಹಿಸುತ್ತಿದೆ. ೫ ಸಖಿ ಮತಗಟ್ಟೆ ಸೇರಿದಂತೆ ೯ ಮಾದರಿ ಮತಗಟ್ಟೆಗಳನ್ನು ಮಾಡಲಾಗುವುದು. ಎಲ್ಲಾ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.ಸುಳ್ಯ ತಾಲೂಕು ಭಾಗದಲ್ಲಿ ಕಂಡುಬಂದ ನಕ್ಸಲ್ ಚಟುವಟಿಕೆಗಳ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ವರದಿಗಳು ತಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಂತಾರಾಜ್ಯ ಗಡಿಭಾಗವಾಗಿರುವ ಪಾಣಾಜೆ, ಈಶ್ವರಮಂಗಲ, ಸಾರಡ್ಕದಲ್ಲಿ ಚೆಕ್ ಪೋಸ್ಟ್ ಮಾಡಲಾಗಿದ್ದು, ಈವರೆಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ವೆಬ್ ಕಾಸ್ಟಿಂಗ್ ಸಹಿತ ಎಲ್ಲಾ ತಪಾಸಣಾ ವ್ಯವಸ್ಥೆಗಳನ್ನು ಈ ಚೆಕ್ ಪೋಸ್ಟ್ ಗಳಲ್ಲಿ ಮಾಡಲಾಗಿದೆ ಎಂದರು.

ಕ್ಷೇತ್ರದಲ್ಲಿ ವಿಡಿಯೋ ಸರ್ವೇಲೆನ್ಸ್ 2 ತಂಡ, ಫ್ಲೈಯಿಂಗ್ ಸ್ಕ್ವಾಡ್ 9, ಸ್ಟಾಟಿಸ್ಟಿಕ್ ಸರ್ವೆಲೆನ್ಸ್ ೯, ಸೆಕ್ಟರ್ ಆಫರ್ಸ್ ೨೦, ವೀಡಿಯೋ ವೀವಿಂಗ್ ಟೀಂ ೧, ಎಂಸಿಸಿ ಟೀಂ ೧, ಅಕೌಂಟಿಂಗ್ ಟೀಂ ೧, ಅಸಿಸ್ಟೆಂಟ್ ಎಕ್ಸ್ಪೆಂಡಿಚರ್ ಅಬ್ಸರ್ವರ್ ೧ ತಂಡ ಕಾರ್ಯಾಚರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.ತಹಸೀಲ್ದಾರ್‌ ಕುಂಇ ಮಹಮ್ಮದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹನುಮ ರೆಡ್ಡಿ ಇದ್ದರು.