ಎಸ್ಸೆಸ್ಸೆಲ್ಸಿ: ಮೊದಲ ದಿನವೇ 547 ವಿದ್ಯಾರ್ಥಿಗಳು ಗೈರು!

| Published : Mar 22 2025, 02:06 AM IST

ಸಾರಾಂಶ

ವೆಬ್ ಕಾಸ್ಟಿಂಗ್ ಮೂಲಕ ಕ್ಯಾಮೆರಾ ಕಣ್ಗಾವಲು ಹಾಕಿದ್ದರಿಂದ ಪಾರದರ್ಶಕ ಪರೀಕ್ಷೆಗಳು ನಡೆದಿವೆ. ವಿದ್ಯಾರ್ಥಿಗಳು ಆಚೆ-ಇಚೆ ಹೊರಳಾಡಿದರೂ ಸೂಚನೆ ನೀಡಿ, ಆ ಪರೀಕ್ಷಾ ಕೇಂದ್ರದ ಮೇಲೆ ನಿಗಾವಹಿಸಲಾಗಿದೆ.

ಕೊಪ್ಪಳ:

ಜಿಲ್ಲಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದು, ಕ್ಯಾಮೆರಾ ಕಣ್ಗಾವಲಿನಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಜರುಗಿದೆ. ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹೂ ಮಳೆ ಸುರಿಸುವ ಮೂಲಕ ಶಿಕ್ಷಕರು ಹಾಗೂ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಈ ಮೂಲಕ ಯಾವುದೇ ಭಯವಿಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಧೈರ್ಯ ತುಂಬಿದ್ದಾರೆ.

ಜಿಲ್ಲೆಯ 73 ಕೇಂದ್ರಗಳಲ್ಲಿ 23,300 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ, 547 ವಿದ್ಯಾರ್ಥಿಗಳು ಗೈರಾಗಿದ್ದು 22,753 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಗಂಗಾವತಿ ತಾಲೂಕಿನ 23 ಪರೀಕ್ಷಾ ಕೇಂದ್ರಗಳಲ್ಲಿ 7170, ಕೊಪ್ಪಳ ತಾಲೂಕಿನ 21 ಕೇಂದ್ರದಲ್ಲಿ 6359, ಕುಷ್ಟಗಿ ತಾಲೂಕಿನ 15 ಕೇಂದ್ರಗಳಲ್ಲಿ 4436 ಹಾಗೂ ಯಲಬುರ್ಗಾ ತಾಲೂಕಿನ 14 ಪರೀಕ್ಷಾ ಕೇಂದ್ರಗಳಲ್ಲಿ 4788 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.

ಅಕ್ರಮಕ್ಕೆ ಬ್ರೇಕ್:

ವೆಬ್ ಕಾಸ್ಟಿಂಗ್ ಮೂಲಕ ಕ್ಯಾಮೆರಾ ಕಣ್ಗಾವಲು ಹಾಕಿದ್ದರಿಂದ ಪಾರದರ್ಶಕ ಪರೀಕ್ಷೆಗಳು ನಡೆದಿವೆ. ವಿದ್ಯಾರ್ಥಿಗಳು ಆಚೆ-ಇಚೆ ಹೊರಳಾಡಿದರೂ ಸೂಚನೆ ನೀಡಿ, ಆ ಪರೀಕ್ಷಾ ಕೇಂದ್ರದ ಮೇಲೆ ನಿಗಾವಹಿಸಲಾಗಿದೆ.

ಹೂ ಮಳೆ:

ಕೊಪ್ಪಳ ಸೇರಿದಂತೆ ಜಿಲ್ಲಾದ್ಯಂತ ಬಹುತೇಕ ಶಾಲೆಗಳಲ್ಲಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳನ್ನು ಹೂ ಮಳೆ ಸುರಿಸಿ, ಶಿಕ್ಷಕರು, ಅಧಿಕಾರಿಗಳು ಸ್ವಾಗತಿಸಿದ್ದಾರೆ. ಕೆಲವೆಡೆ ಚಾಕಲೆಟ್, ಪೆನ್ನು ಹಾಗೂ ಹೂ ನೀಡಿ ಸ್ವಾಗತಿಸಿ ಪರೀಕ್ಷೆಗೆ ಆಲ್ ದಿ ಬೆಸ್ಟ್ ಹೇಳಿ, ಧೈರ್ಯ ತುಂಬಲಾಯಿತು.

ಮೊದಲ ದಿನ ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆದಿವೆ. ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದಲೇ ಬಂದು ಪರೀಕ್ಷೆಗೆ ಹಾಜರಾಗಿದ್ದಾರೆ. ನಕಲು ತಡೆಯಲು ವಿಶೇಷ ನಿಗಾ ವಹಿಸಿದ್ದರಿಂದ ಯಾವುದೇ ನಕಲು ಮಾಡಿರುವ ವರದಿಗಳು ಆಗಿಲ್ಲ ಎಂದು ಡಿಡಿಪಿಐ ಶ್ರೀಶೈಲ ಬಿರಾದರ ಹೇಳಿದರು.