ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಕಲಿಕೆ, ಸಾಧನೆಗೆ ಅಂಧತ್ವ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಇಬ್ಬರೂ ಮಕ್ಕಳೆ ಸಾಕ್ಷಿ.

ಇಲ್ಲಿನ ಆನಂದನಗರದಲ್ಲಿ ಇರುವ ಶ್ರೀ ಆರೂಢ ಅಂಗವಿಕಲ ಶಿಕ್ಷಣ ಸಂಸ್ಥೆಯ ಸದ್ಗುರು ಶ್ರೀ ಸಿದ್ಧಾರೂಢ ಅಂಧ ಮಕ್ಕಳ ಶಾಲೆಯ ನಿರುಪಾದಗೌಡ ಪೊಲೀಸ್‌ಪಾಟೀಲ (ಶೇ. 94.08) ಹಾಗೂ ನಿರ್ಮಲಾ ಪಾಟೀಲ (ಶೇ. 91.52) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಕ್ಕಳ್ಳಿ ಗ್ರಾಮದ ನಿರುಪಾದಗೌಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 588 ಅಂಕ ಪಡೆದಿದ್ದಾನೆ. ಕನ್ನಡ 117, ಹಿಂದಿ 100, ರಾಜ್ಯಶಾಸ್ತ್ರ 100, ಇಂಗ್ಲಿಷ್‌ 85, ಅರ್ಥಶಾಸ್ತ್ರ 99, ಸಮಾಜ ವಿಜ್ಞಾನ 87 ಅಂಕ ಪಡೆದಿದ್ದಾನೆ.


ಬಡ ಕುಟುಂಬ:

ಕೃಷಿಯಿಂದ ಬದುಕು ಕಟ್ಟಿಕೊಂಡಿರುವ ನಿರುಪಾದಗೌಡ ತಂದೆ ಬಸನಗೌಡರೇ ಕುಟುಂಬದ ಆಧಾರಸ್ತಂಭ. ನಿರುಪಾದಗೌಡ 1ರಿಂದ 3ನೇ ತರಗತಿ ವರೆಗೆ ರೋಣ ತಾಲೂಕಿನ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆ, 4ರಿಂದ 7ರ ವರೆಗೆ ಹುಬ್ಬಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ 8ರಿಂದ ಎಸ್‌ಎಸ್‌ಎಲ್‌ಸಿ ವರೆಗೆ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಅಂಧ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ.

ನಿರ್ಮಲಾಗೆ ಶೇ. 91:

ಇದೇ ಶಾಲೆಯ ಇನ್ನೊಬ್ಬ ವಿದ್ಯಾರ್ಥಿನಿ, ಕೃಷಿಕನ ಮಗಳಾದ ನಿರ್ಮಲಾ ಮಡಿವಾಳಗೌಡ ಪಾಟೀಲ ಸಹ 572 ಅಂಕ ಪಡೆದಿದ್ದಾಳೆ. ಕನ್ನಡ 108, ಹಿಂದಿ 100, ರಾಜ್ಯಶಾಸ್ತ್ರ 100, ಇಂಗ್ಲಿಷ್ 81, ಸಮಾಜ ವಿಜ್ಞಾನ 84, ಅರ್ಥಶಾಸ್ತ್ರ 99 ಅಂಕ ಪಡೆದಿದ್ದಾಳೆ.

ಬ್ರೈಲ್‌ ಲಿಪಿ:

ಹುಟ್ಟಿದಾಗ ತನ್ನ ಮಗಳು ಅಂಧಳಾಗಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆ ತಂದೆ ಬ್ರೈಲ್‌ ಲಿಪಿ ಶಿಕ್ಷಣವಿರುವ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಅಂಧ ಮಕ್ಕಳ ಶಾಲೆಗೆ ದಾಖಲಿಸುತ್ತಾರೆ. ಅಂದಿನಿಂದ ಈ ವರೆಗೆ ಅಲ್ಲಿಯೇ ಓದಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ.ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ವಿದ್ಯಾರ್ಥಿಗಳು ಸಾಧಿಸಿ ತೋರಿಸಿ ಇತರರಿಗೂ ಪ್ರೇರಣೆಯಾಗಿದ್ದಾರೆ.

ಗುರುಸಿದ್ದೇಶ್ವರ ಲಕ್ಕುಂಡಿ, ಶ್ರೀ ಆರೂಢ ಅಂಗವಿಕಲ ಶಿಕ್ಷಣ ಸಂಸ್ಥೆ ಅಧ್ಯಕ್ಷಸೂಕ್ತ ತರಬೇತಿ, ಮಾರ್ಗದರ್ಶನ ದೊರೆತ ಹಿನ್ನೆಲೆ ಈ ಸಾಧನೆ ಮಾಡಲಾಗಿದ್ದು, ಇದರಲ್ಲಿ ತಂದೆ-ತಾಯಿ, ಶಿಕ್ಷಕರ ಶ್ರಮ ಬಹಳಷ್ಟಿದೆ. ಮುಂದೆ ಐಎಎಸ್‌ ಮಾಡುವಾಸೆ.

ನಿರುಪಾದಗೌಡ ಪೊಲೀಸ್‌ಪಾಟೀಲ

ಇನ್ನೂ ಹೆಚ್ಚಿನ ಅಂಕ ಬರುವ ನಿರೀಕ್ಷೆಯಿತ್ತು. ನನ್ನ ಯಶಸ್ಸಿಗೆ ನನ್ನ ತಂದೆ-ತಾಯಿಯ ಶ್ರಮವೇ ಕಾರಣವಾಗಿದ್ದು ಮುಂದೆಯೂ ಕಲಿತು ಸಾಧನೆ ಮಾಡುವಾಸೆ.

ನಿರ್ಮಲಾ ಪಾಟೀಲ, ಅಂಧ ವಿದ್ಯಾರ್ಥಿನಿ