ಸಾರಾಂಶ
ಕಾರವಾರ: ಜಿಲ್ಲೆಯಲ್ಲಿ ಜು. 5ರಿಂದ 11ರ ವರೆಗೆ ನಡೆಯುವ ಎಸ್.ಎಸ್.ಎಲ್.ಸಿ.-3 ಪರೀಕ್ಷೆಗಳನ್ನು ಪರೀಕ್ಷಾ ಮಾರ್ಗಸೂಚಿಗಳನ್ವಯ ಅತ್ಯಂತ ವ್ಯವಸ್ಥಿತವಾಗಿ ನಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಸ್.ಎಸ್.ಎಲ್.ಸಿ.-3 ಪರೀಕ್ಷೆಗೆ ಜಿಲ್ಲೆಯಿಂದ ಒಟ್ಟು 2,609 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಇದಕ್ಕಾಗಿ 12 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದ ಅವರು, ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಪರೀಕ್ಷೆಗೆ ಹಾಜರಾಗುವ ಕುರಿತಂತೆ ವೈಯಕ್ತಿಕವಾಗಿ ಸಂಪರ್ಕಿಸಿ, ಅವರನ್ನು ಪ್ರೇರೇಪಿಸುವಂತೆ ಮತ್ತು ಅವರು ಉತ್ತೀರ್ಣರಾಗುವ ನಿಟ್ಟಿನಲ್ಲಿ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗದಂತೆ ಕಾಳಜಿ ವಹಿಸಿ ಎಂದು ಸೂಚಿಸಿದರು. ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಸಾಗಣೆ ಸಂದರ್ಭದಲ್ಲಿ ಮತ್ತು ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸುವಂತೆ ತಿಳಿಸಿದ ಅವರು ಮೇಲ್ವಿಚಾರಕರು ಮತ್ತು ಕಸ್ಟೋಡಿಯನ್‌ಗಳನ್ನು ನೇಮಕ ಮಾಡುವಂತೆ ತಿಳಿಸಿದರು.
ಎಸ್.ಎಸ್.ಎಲ್.ಸಿ.-3 ಪರೀಕ್ಷೆಯು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮತ್ತು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಈ ಬಾರಿಯ ಕೊನೆಯ ಅವಕಾಶವಾಗಿದ್ದು, ಇದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅರಿವು ಮೂಡಿಸುವಂತೆ ತಿಳಿಸಿದ ಅವರು, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದೇ, ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.ಡಿಡಿಪಿಐ ಲತಾ ನಾಯಕ, ಡಿವೈಎಸ್ಪಿ ಗಿರೀಶ್ ಮತ್ತಿತರರು ಇದ್ದರು.