ಮಾಲೂರು: ತಾಲೂಕಿನ ದೊಡ್ಡಶಿವಾರ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ ಕೆಂಪಯ್ಯ ಭೇಟಿ ನೀಡಿ ೧೦ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಎಸ್ಎಸ್ಎಲ್ ಸಿ ಪರೀಕ್ಷೆ ಬಗ್ಗೆ ಸಂವಾದ ನಡೆಸಿದರು. ೨ ಪೂರ್ವ ಸಿದ್ಧತಾ ಪರೀಕ್ಷೆಗಳು ಮುಗಿದಿದ್ದು, ೩ನೇ ಪೂರ್ವ ಸಿದ್ಧತಾ ಪರೀಕ್ಷೆ ಸೋಮವಾರದಿಂದ ನಡೆಯುತ್ತದೆ. ನಂತರ ಮಾರ್ಚ್ ೧೮ರಿಂದ ಏಪ್ರಿಲ್ ೨ರವರೆಗೆ ಮೊದಲನೇ ವಾರ್ಷಿಕ ಪರೀಕ್ಷೆ ನಡೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅಗತ್ಯ ಪೂರ್ವ ಸಿದ್ಧತೆ ನಡೆಸಿ ಪರೀಕ್ಷೆ ಬರೆಯುವ ಮೂಲಕ ಪಾಸಾಗಬೇಕೆಂದು ಸಲಹೆ ನೀಡಿದರು.

ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟಿರುವ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೋತ್ತರಗಳು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯಿಂದ ನೀಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು. ಪೋಷಕರಿಗೆ ಮಕ್ಕಳು ರಾತ್ರಿಯ ವೇಳೆ ೧೧:೩೦ವರೆಗೂ ಹಾಗೂ ಬೆಳಗಿನ ವೇಳೆ ೫ ಗಂಟೆಯಿಂದ ಓದಲು ನೋಡಿಕೊಳ್ಳಬೇಕು ಎಂಬ ಸಲಹೆ ನೀಡಿದರು.

ಪೋಷಕರು ಶಾಲಾ ಶಿಕ್ಷಕರೊಂದಿಗೆ ಕೈಜೋಡಿಸಿದಾಗ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಸಹಾಯವಾಗುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೂ ಪೋಷಕರು ಮನೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ, ಕಂಪ್ಯೂಟರ್‌ನಿಂದ ದೂರ ಉಳಿಯುವಂತೆ ನೋಡಿಕೊಳ್ಳಬೇಕು ಎಂದರು. ಮುಖ್ಯ ಶಿಕ್ಷಕಿ ಎನ್. ಮಮತಾ, ಸಹ ಶಿಕ್ಷಕ ಗುಲ್ಜರ್, ಇಸಿಒ ಅಶೋಕ್, ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.