ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ತವ್ಯನಿರತ ಶಿಕ್ಷಕರ ಅಮಾನತು ರದ್ದುಗೊಳಿಸಿ, ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿ ಮಂಗಳವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಘಟಕದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಅವರಿಗೆ ಮನವಿ ಸಲ್ಲಿಸಿದರು.ಮಾ.25ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಆದೇಶದಂತೆ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಹೊರಗಿನ ನಕಲು ಹೊತ್ತು ತರುವ ವ್ಯಕ್ತಿಗಳ ಹಾವಳಿ ತೀವ್ರವಾಗಿದೆ ಎಂದು ಸಂಘದ ಪದಾಧಿಕಾರಿಗಳು ದೂರಿದರು.
ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿದರೂ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಇದರಿಂದ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಷ್ಟವಾಗುತ್ತಿದೆ. ಸುರಪುರ ತಾಲೂಕಿನ ಶಿಕ್ಷಕರಿಬ್ಬರನ್ನು ಅಮಾನತು ಮಾಡಿರುವುದು ಖಂಡನೀಯ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಹುದ್ದೆ ಮಾಡಲು ಶಿಕ್ಷಕರು ಭಯಪಡುತ್ತಿದ್ದು, ನಕಲು ತಡೆಯಲು ತಾವುಗಳು ಪೊಲೀಸ್ ಇಲಾಖೆಗೆ ತಕ್ಷಣವೇ ಹೆಚ್ಚಿನ ಭದ್ರತೆ ಒದಗಿಸಲು ಸೂಚಿಸಬೇಕು. ಅಮಾನತಿಗೊಳಗಾದ ಶಿಕ್ಷಕರಾದ ಸಾಹೇಬಗೌಡ ಹುಕ್ಕಲಿ ಹಾಗೂ ಹಣಮಂತ್ರಾಯ ಆದೇಶ ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಬೇಕು. ಇಲ್ಲದಿದ್ದರೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯ ಸರಕಾರಿ ನೌಕರರ ಸಂಘ ತಾಲೂಕು ಸಂಘಟನೆಯ ತಾಲೂಕಾಧ್ಯಕ್ಷ ಸಂಜೀವ ದರಬಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಗೋವಿಂದಪ್ಪ ಟನಿಖೆದಾರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಖಾದರ್ ಪಟೇಲ, ಸೋಮರೆಡ್ಡಿ ಮಂಗ್ಯಾಳ, ಶರಣಬಸವ ಗೋನಾಲ, ಸಾಹೇಬರೆಡ್ಡಿ, ಭೀಮಣ್ಣ ಕೋನಾಳ, ಗುರು ರಾಠೋಡ, ಧೀರೇಂದ್ರ ಕುಲಕರ್ಣಿ, ದೇವರಾಜ, ಮೈಲಾರಿ ಸೇರಿದಂತೆ ಇತರರಿದ್ದರು.ವಿದ್ಯಾರ್ಥಿಗಳ ನಕಲು, ಶಿಕ್ಷಕಿಗೆ ನೋಟಿಸ್:ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಯಾದಗಿರಿ ಕಾರ್ಯಾಲಯದಲ್ಲಿ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮೆರಾ ವೀಕ್ಷಣೆ ಮಾಡಿದಾಗ, ಪರೀಕ್ಷೆ ಕೇಂದ್ರದ ಕೋಣೆ ಸಂಖ್ಯೆ 3ರಲ್ಲಿ, ವಿದ್ಯಾರ್ಥಿಗಳು ನಕಲು ಮಾಡುವುದು ಕಂಡು ಬಂದಿದೆ.
ಈ ಪರೀಕ್ಷೆ ಕೋಣೆ ಮೇಲ್ವಿಚಾರಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಯಲ್ಲಮ್ಮ ಅವರು ನಕಲು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಹಾಗೂ ಮುಖ್ಯ ಅಧಿಕ್ಷಕರ ಗಮನಕ್ಕೆ ತಾರದೆ ಕರ್ತವ್ಯ ಲೋಪವೆಸಗಿರುವುದು ವೆಬ್ ಕಾಸ್ಟಿಂಗ್ ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡು ಬಂದಿರುತ್ತದೆ ಎಂದು ಆರೋಪಿಸಿ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಶಿಕ್ಷಕಿಗೆ ನೋಟಿಸ್ ನೀಡಿದ್ದಾರೆ. 3 ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.