- ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. ಸುಗಮ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮವಹಿಸಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ತಯಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ ಬಗ್ಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶೇಷ ತರಬೇತಿ ನೀಡಿ:
ಜಿಲ್ಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ. ಸೇರಿದಂತೆ ಶೈಕ್ಷಣಿಕ ಪ್ರಗತಿ ಫಲಿತಾಂಶ ಉತ್ತಮಪಡಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ 209 ಶಾಲೆಗಳು ಹಿಂದುಳಿದಿದ್ದವು, ಆದರೆ, ಶಿಕ್ಷಕರ ಶ್ರಮದಿಂದ ಈ ಸಂಖ್ಯೆ ಈಗ 39ಕ್ಕೆ ಇಳಿದಿರುವುದು ಆಶಾದಾಯಕ ಬೆಳವಣಿಗೆ. ಈ ಸಂಖ್ಯೆಯು ಇನ್ನೂ ಕಡಿಮೆ ಆಗಲು ಕ್ರಮವಹಿಸಬೇಕು. ವಿದ್ಯಾರ್ಥಿಗಳಿಗೆ ಕೇವಲ 13 ಅಂಕಗಳನ್ನು ಪಡೆಯುವಂತೆ ಸಿದ್ಧತೆ ಮಾಡುವುದು ಕಷ್ಟದ ಕೆಲಸವಲ್ಲ. ಆಂತರಿಕ ಅಂಕಗಳ ಜೊತೆಗೆ ಈ ಕನಿಷ್ಠ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಬೇಕು. ಜಿಲ್ಲೆಯಲ್ಲಿ ಈ ಹಿಂದಿನಂತೆ ಯಾವುದೇ ಗೊಂದಲಗಳಿಲ್ಲದೇ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.
200 ಮೀಟರ್‌ವರೆಗೆ ನಿಷೇಧಾಜ್ಞೆ:ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ನಕಲು ತಡೆಯಲು ಜೆರಾಕ್ಸ್ ಅಂಗಡಿ ಮತ್ತು ತರಬೇತಿ ಕೇಂದ್ರಗಳ ಮೇಲೆ ನಿಗಾ ಇಡಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪರೀಕ್ಷೆ ನಡೆಯುವ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಬೆಸ್ಕಾಂ ಕ್ರಮ ವಹಿಸಬೇಕು. ಆರೋಗ್ಯ ಇಲಾಖೆ ಪರೀಕ್ಷಾ ಕೇಂದ್ರಗಳಿಗೆ ಶೂಶ್ರೂಷಕರನ್ನು ನಿಯೋಜಿಸುವಂತೆ ಸೂಚಿಸಿದರು.
ಇಂಧನ ಪೂರೈಕೆ ಸಮರ್ಪಕ ಇರಲಿ:ಏ.10ರ ವರೆಗೆ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯಲ್ಲಿ ಇಂಧನ ಪೂರೈಕೆಯಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲು ಆಹಾರ ಇಲಾಖೆಗೆ ಸೂಚನೆ ನೀಡಲಾಗಿದೆ. ನಕಲಿ ದಾಖಲೆಗಳನ್ನು ನೀಡಿ ದಾಖಲಾತಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಪರೀಕ್ಷಾ ಅಕ್ರಮಗಳಿಗೆ ಶಾಲೆಗಳು ಅವಕಾಶ ಕಲ್ಪಿಸದಂತೆ ಕ್ರಮವಹಿಸಬೇಕು. ಜೆರಾಕ್ಸ್ ಸೆಂಟರ್‌ಗಳು ಪರೀಕ್ಷಾ ದಿನ ಮುಚ್ಚಲು ಸೂಚಿಸಲಾಗಿದೆ. ಪೋಷಕರಿಗೆ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸುವುದು ನಮ್ಮ ಕರ್ತವ್ಯ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೇ, ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಎಲ್ಲ 81 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ಆಯುಕ್ತರ ಕಚೇರಿ ಹಾಗೂ ಜಿಲ್ಲಾಮಟ್ಟದ ಸ್ಮಾರ್ಟ್ ಸಿಟಿ ಕೇಂದ್ರದಿಂದ ನೇರ ನಿಗಾ ವಹಿಸಲಾಗುತ್ತದೆ. ಮೂಲ ಸೌಕರ್ಯಗಳನ್ನು ಪರಿಶೀಲಿಸಿಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಇಲ್ಲ ಎಂದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ್ ರಾವ್, ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಹನುಮಕ್ಕ, ಡಯಟ್ ಉಪ ನಿರ್ದೇಶಕಿ ಗೀತಾ, ಶಿಕ್ಷಣಾಧಿಕಾರಿ ಸಿದ್ದಪ್ಪ ಇತರರು ಉಪಸ್ಥಿತರಿದ್ದರು.
- - -(ಬಾಕ್ಸ್) * ಜಿಲ್ಲೆಯಲ್ಲಿ 21765 ವಿದ್ಯಾರ್ಥಿಗಳ ನೋಂದಣಿ: ಕೊಟ್ರೇಶ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ಮಾತನಾಡಿ, ಮಾರ್ಚ್ 18ರಂದು ಪ್ರಥಮ ಭಾಷೆ, ಮಾರ್ಚ್ 23ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ, ಮಾರ್ಚ್ 25 ದ್ವಿತೀಯ ಭಾಷೆ, ಮಾರ್ಚ್ 28 ರಂದು ಗಣಿತ ಮತ್ತು ಸಮಾಜಶಾಸ್ತ್ರ, ಮಾರ್ಚ್ 30 ರಂದು ತೃತೀಯ ಭಾಷೆ, ಎನ್.ಎಸ್.ಕ್ಯೂ, ಎಫ್, ಏ.1ರಂದು ಜೆ.ಟಿ.ಎಸ್ ವಿಷಯಗಳು ಮತ್ತು ಏ.2 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದರು.
ಜಿಲ್ಲೆಯ 476 ಶಾಲೆಗಳಿಂದ ಚನ್ನಗಿರಿ ತಾಲೂಕಿನಲ್ಲಿ 3867 ವಿದ್ಯಾರ್ಥಿಗಳು, ದಾವಣಗೆರೆ ಉತ್ತರ 3746 ವಿದ್ಯಾರ್ಥಿಗಳು, ದಾವಣಗೆರೆ ದಕ್ಷಿಣ 5737 ವಿದ್ಯಾರ್ಥಿಗಳು, ಹರಿಹರ 3186 ವಿದ್ಯಾರ್ಥಿಗಳು, ಹೊನ್ನಾಳಿ 2829 ವಿದ್ಯಾರ್ಥಿಗಳು ಹಾಗೂ ಜಗಳೂರು ತಾಲೂಕಿನಲ್ಲಿ 2400 ವಿದ್ಯಾರ್ಥಿಗಳು ಹೀಗೆ ಒಟ್ಟು 21765 ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 81 ಪರೀಕ್ಷಾ ಕೇಂದ್ರಗಳು ಮತ್ತು 31 ಪರೀಕ್ಷಾ ಕೇಂದ್ರಗಳ ಮಾರ್ಗಗಳ ಸಂಖ್ಯೆ ಇವೆ ಎಂದು ಸಭೆಗೆ ಮಾಹಿತಿ ನೀಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಬಸ್ ವಿಳಂಬ ಸಾಧ್ಯತೆ ಇರುವುದರಿಂದ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ತಲುಪುವಂತೆ ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ ಎಂದರು.- - -
-12ಕೆಡಿವಿಜಿ36:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಸಿದ್ಧತಾ ಸಭೆ ನಡೆಯಿತು.