ಸಾರಾಂಶ
ಶಿರಸಿ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ
ಶಿರಸಿ: ಇಲ್ಲಿನ ಐದು ವೃತ್ತದ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್ ೬೨೫ಕ್ಕೆ ೬೨೫ ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಬಿಹಾರ ಮೂಲದ ಹಾಲಿ ಇಲ್ಲಿನ ಟಿಪ್ಪುನಗರದ ಮಹಮ್ಮದ್ ಇಸ್ಲಾಂ ಹಾಗೂ ಸಾಹಿರಾಬಾನು ದಂಪತಿಯ ಪುತ್ರಿ ಶಗುಫ್ತಾ ಅಂಜುಮ್ ಟ್ಯೂಷನ್ ಪಡೆಯದೇ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ವಿಷಯವನ್ನು ಅಧ್ಯಯನ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾಳೆ.ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಅತ್ಯಂತ ಖುಷಿ ತಂದಿದೆ. ನನ್ನ ವಿದ್ಯಾಭ್ಯಾಸಕ್ಕೆ ಶಿಕ್ಷಕರು, ಪಾಲಕರು ಬೆಂಬಲವಾಗಿ ನಿಂತಿದ್ದಾರೆ. ಅಂದಿನ ವಿಷಯವನ್ನು ಅಂದೇ ಓದುತ್ತಿದ್ದೆ. ಎಸ್.ಎಸ್.ಎಲ್.ಸಿಯ ಆರಂಭದಲ್ಲಿ ೨ ತಾಸು ಓದುತ್ತಿದ್ದೆ. ನವೆಂಬರ್, ಡಿಸೆಂಬರ್, ಜನೇವರಿ, ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಪ್ರತಿನಿತ್ಯ ೮ ಗಂಟೆಗಳು ಓದಿರುವುದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡಳು.
ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಡಿಡಿಪಿಐ ಪಿ.ಬಸವರಾಜ, ಬಿಇಒ ನಾಗರಾಜ ನಾಯ್ಕ ಸರ್ಕಾರದ ಪರವಾಗಿ ವಿದ್ಯಾರ್ಥಿನಿಗೆ ಸನ್ಮಾನಿಸಿ, ಗೌರವಿಸಿದರು.